ಬೆಳೆ ನಷ್ಟ ವಸ್ತು ಸ್ಥಿತಿ ಅರಿಯಲು ತಾಲ್ಲೂಕಿಗೆ ಆಗಮಿಸಿದ ತೋಟಗಾರಿಕೆ ಆಯುಕ್ತ

ಸಿರಾ, ಜೂ. ೧೯- ಕಳೆದ ತಿಂಗಳು ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯಲ್ಲಿ ಬೀಸಿದ ಭಾರೀ ಬಿರುಗಾಳಿಗೆ ನೆಲಕಚ್ಚಿದ ಅಡಿಕೆ ಮತ್ತು ತೆಂಗು ಸೇರಿದಂತೆ ಹಲವು ತೋಟಗಾರಿಕೆ ಬೆಳೆ ನಷ್ಟ ಕುರಿತಂತೆ ವಸ್ತುಸ್ಥಿತಿ ಅರಿಯಲು ತೋಟಗಾರಿಕೆ ಆಯುಕ್ತ ಪ್ರಭಾಸ್‍ಚಂದ್ರ ರೇ ಹಾನಿಗೊಳಗಾದ ಭಾಗಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿ, ರೈತರಿಂದ ವಿವರಣೆ ಪಡೆದಿದ್ದಾರೆ.

ಬಿರುಗಾಳಿಯಿಂದ ಬಾಧೆಗೊಳಗಾದ ಶಿರಾದಡು, ಚಿಕ್ಕತಿಮ್ಮನಹಳ್ಳಿ, ಕಾಳಾಪುರ, ಮಾಯಸಂದ್ರ ಹಾಗೂ ಮಾಟಗಾನಹಳ್ಳಿ ವ್ಯಾಪ್ತಿಯಲ್ಲಿ ಹಾನಿಗೊಳಗಾಗಿದ್ದ ತೋಟಗಳಿಗೆ ಭೇಟಿ ನೀಡಿದ ಅಧಿಕಾರಿ, ಸ್ಥಳೀಯರಿಂದ ವಸ್ತು ಸ್ಥಿತಿ ಅರಿಯುವ ಯತ್ನ ನಡೆಸಿದರು. ಈ ವೇಳೆ ಜೊತೆಯಲ್ಲಿದ್ದ ಸ್ಥಳೀಯ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡ ಹಾಗೂ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಹಾನಿಗೊಳಗಾದ ಪ್ರದೇಶಗಳ ದರ್ಶನ ಮಾಡಿಸಿ, ನಷ್ಟದ ಬಗ್ಗೆ ವಿವರಿಸಿದರು.

ಈ ವೇಳೆ ಅಧಿಕಾರಿಯೊಂದಿಗೆ ಚರ್ಚಿಸಿದ ಎಸ್.ಆರ್.ಗೌಡ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಅನ್ವಯ ಗಿಡವೊಂದಕ್ಕೆ ನೀಡಲಾಗುತ್ತಿರುವ ಪರಿಹಾರ ತೀರಾ ಕಡಿಮೆಯಾಗಿದ್ದು, ಅದರಿಂದ ಗಿಡವನ್ನೂ ತೆರವುಗೊಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೊಸ ಮಾರ್ಗಸೂಚಿ ರಚಿಸಿ ರೈತರ ಹಿತ ಕಾಪಾಡುವಂತೆ ಅಧಿಕಾರಿಯನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಪರಿಹಾರದ ಮೊತ್ತ ಹೆಚ್ಚಿಸುವುದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕಾರ್ಯವಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ನಾನು ಮುಖ್ಯಮಂತ್ರಿಗಳ ವಿಶೇಷ ಸಭೆಗೆ ತೆರಳಬೇಕಿದ್ದು, ಇಲ್ಲಿನ ವಾಸ್ತವ ಪರಿಸ್ಥಿತಿ ತಿಳಿಸಿ, ಪರಿಹಾರ ಹೆಚ್ಚಿಸುವಂತೆ ಕೋರುತ್ತೇನೆ. ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಗೊಂಡಲ್ಲಿ ಪರಿಹಾರ ಹೆಚ್ಚಳ ಆದರೂ ಆಗುವ ಸಾಧ್ಯತೆ ಇದೆ ಎಂದು ಸಮಾಧಾನಗೊಳಿಸಲು ಪ್ರಯತ್ನಿಸಿದರು ಎನ್ನಲಾಗಿದೆ.

ಇಲಾಖೆಯ ಜಂಟಿ ನಿರ್ದೇಶಕ ಧನರಾಜ್, ತುಮಕೂರಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಂದೀಶ್, ಎಡಿಎಚ್ ಶಶಿಧರ್, ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಮಹಂತೇಶ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ರಂಗನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment