ಬೆಳೆ ನಷ್ಟಕ್ಕೆ ಕೇಂದ್ರದಿಂದ ಶಾಶ್ವತ ಪರಿಹಾರ

ಚಿಕ್ಕನಾಯಕನಹಳ್ಳಿ, ಜ. ೧೨- ರೈತರು ಬೆಳೆ ವಿಮೆಗಾಗಿ ಕಂಪೆನಿಗೆ ಕಟ್ಟಿರುವ ಹಣವನ್ನು ಕೇಂದ್ರ ಸರ್ಕಾರವೇ ಕಂತನ್ನು ತುಂಬುವ ಮೂಲಕ ಬೆಳೆ ನಷ್ಟದ ಸಂಕಷ್ಟಕ್ಕೆ ಮೋದಿ ಸರ್ಕಾರ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ತಾಲ್ಲೂಕು ಬೆಳೆವಿಮೆ ಪಾಲಿಸಿದಾರರ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ಫಸಲ್‌ಭೀಮಾ ಯೋಜನೆ ಕುರಿತು ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಎರಡು ವರ್ಷದಿಂದ ನರೇಂದ್ರಮೋದಿ ಸರ್ಕಾರ ರೈತ ಪರವಾದ ಉತ್ತಮ ಕಾರ್ಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಅದರಲ್ಲಿ ನಮ್ಮ ಬೇಡಿಕೆಯನ್ನು ಮೀರಿ ಕೇಂದ್ರ ಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲಯನ್ನು ಕ್ವಿಂಟಾಲ್‌ಗೆ 9650 ರೂ. ನೀಡಿರುವುದು ತೆಂಗು ಬೆಳೆಗಾರರಿಗೆ ಆಶಾದಾಯಕ ಸಂಗತಿಯಾಗಿದೆ. ಜಿಎಸ್‌ಟಿಯಡಿ ಕೊಬ್ಬರಿ ಮಾರಾಟದಿಂದ ಸಾಕಷ್ಟು ಆದಾಯ ಸರ್ಕಾರಕ್ಕೆ ಹರಿದು ಬರುತ್ತಿದ್ದು, ಇದರ ಆದಾಯವನ್ನು ರೈತರಿಗೆ ವರ್ಗಾಯಿಸುತ್ತಿದೆ. ಬೆಳೆ ವಿಮೆಯಲ್ಲಿ ಈ ಹಿಂದೆ ರೈತರಿಗೆ ವಿಮೆ ಹಣ ಬರುವುದಕ್ಕೆ ನಾನಾ ರೀತಿಯ ನಿಬಂಧನೆಗಳಿದ್ದವು. ನಮ್ಮ ತಾಲ್ಲೂಕಿನಲ್ಲಿ ಬೆಳೆ ವಿಮೆಗೆ ರಾಗಿ ಮಾತ್ರ ಸೇರ್ಪಡೆಯಾಗಿತ್ತು, ಆದರೆ ಈಗ ಇದರ ಜತೆಯಲ್ಲಿ ಹೆಸರು ಬೆಳೆಯೂ ಸೇರ್ಪಡೆಯಾಗಿದೆ ಎಂದರು.

ಕಳೆದ ಸಾಲಿನಲ್ಲಿ ನಮ್ಮ ತಾಲ್ಲೂಕಿನಲ್ಲಿ 5 ಸಾವಿರ ಮಂದಿ ರೈತರು ಬೆಳೆವಿಮೆಗಾಗಿ ಬ್ಯಾಂಕಿನ ಮೂಲಕ ಹಣ ಕಟ್ಟಿ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್‌ನವರು ಈ ಹಣವನ್ನು ವಿಮಾ ಕಂಪೆನಿಗೆ ಸರಿಯಾದ ಸಮಯಕ್ಕೆ ಜಮಾ ಮಾಡದ ಕಾರಣ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ್ದರು.

ತುಮಕೂರಿನಲ್ಲಿ ಇಂತಹ 9 ಸಾವಿರ ಅರ್ಜಿ ತಿರಸ್ಕೃತವಾಗಿತ್ತು. ಈ ಬಗ್ಗೆ ಶಾಸನ ಸಭೆಯಲ್ಲಿ ನಾನು ಬಲವಾಗಿ ಪ್ರತಿಪಾದಿಸಿದ ನಂತರ ಬ್ಯಾಂಕ್‌ನವರೇ ಎಲ್ಲರಿಗೂ ವಿಮೆಹಣ ನೀಡಬೇಕಾಗಿ ಬಂದು ಇದು ಈಗ ಕಾರ್ಯರೂಪಕ್ಕೆ ಬರುತ್ತಿದೆ ಎಂದರು.

ಇನ್ನು ಮುಂದೆ ರೈತರು ಕೇವಲ ಪಹಣಿ ಮಾತ್ರ ನೀಡಬೇಕಿದ್ದು ಇನ್ನಾವುದೆ ದಾಖಲೆಯನ್ನು ಬ್ಯಾಂಕ್‌ನವರು ಕೇಳುವ ಹಾಗಿಲ್ಲದಂತೆ ಮಾಡಲಾಗಿದೆ ಎಂದ ಅವರು, ತಾಲ್ಲೂಕು ಮರಳುಗಾಡಾಗುವ ಹಂತಕ್ಕೆ ಬಂದಿದೆ. ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಯಾವುದೇ ಕಾರ್ಯ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಕೊಳವೆ ಬಾವಿಗಳ ಅವಲಂಬನೆಯಿಂದ ಅಂತರ್ಜಲವನ್ನು ತಳಕಾಣಿಸಿದ್ದೇವೆ. ಇನ್ನಾದರೂ ರೈತರು ಬಿದ್ದ ಮಳೆ ನೀರನ್ನು ಹರಿಯಬಿಡದೆ ತಡೆಯೊಡ್ಡುವುದು, ಕೃಷಿಯಲ್ಲಿ ಹನಿ ನೀರಾವರಿಗೆ ಆದ್ಯತೆ ನೀಡುವುದು ಹಾಗೂ ಹೆಚ್ಚು ನೀರು ಬಯಸುವ ಬೆಳೆಯನ್ನು ಹಾಕದಿರುವ ಬಗ್ಗೆ ಎಚ್ಚರವಹಿಸಬೇಕಿದೆ. ಕೇಂದ್ರ ಸರ್ಕಾರ ಕೃಷಿ ಸಿಂಚನ ಯೋಜನೆಯಡಿ ಕೃಷಿ ಹೊಂಡ ಮಾಡಿಕೊಳ್ಳುವ ಎಲ್ಲರಿಗೂ ಸಹಾಯಧನ ನೀಡುತ್ತಿದ್ದು ಇದಕ್ಕೆ ಹಣದ ಕೊರತಯೇ ಇಲ್ಲದಂತೆ ಮಾಡಿದ್ದಾರೆ ಎಂದರು.

ಕೃಷಿ ವಿಮಾ ಕಂಪನಿಯ ನಾಗರತ್ನಮ್ಮ ಮಾತನಾಡಿ, ಕೃಷಿ ವಿಮೆಯಲ್ಲಿ ರೈತರಿಗೆ ಸಿಗುವ ಸೌಲಭ್ಯ ಹಾಗೂ ಅವರು ಅನುಸರಿಸಬೇಕಾದ ನಿಯಮ ಮತ್ತು ಹೊಣೆಗಾರಿಕೆಯ ಬಗ್ಗೆ ತಿಳಿಸಿದರು.
ಬೆಳೆವಿಮೆ ಪಾಲಿಸಿದಾರರ ವೇದಿಕೆ ಅಧ್ಯಕ್ಷ ಕುಮಾರಯ್ಯ ಮಾತನಾಡಿ,  ಬೆಳೆ ವಿಮೆಯಲ್ಲಿ ಈ ತಾಲ್ಲೂಕಿನ ರೈತರ ಕೃಷಿ ಬದುಕಿನ ಆಧಾರದ ಮೇಲೆ ವಿಮೆಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳೆವಿಮೆ ಪಾಲಿಸಿದಾರರ ವೇದಿಕೆ ಕಾರ್ಯದರ್ಶಿ ಸಿ.ಎಚ್.ಚಿದಾನಂದ  ಫಸಲ್ ಭೀಮಾ ಯೋಜನೆಯಲ್ಲಿ ಬೆಳೆವಿಮೆ ಪಾಲಿಸಿದಾರರಿಗಾಗುತ್ತಿದ್ದ ಕಿರುಕುಳ ಹಾಗೂ ವೇದಿಕೆಯ ದ್ಯೇಯೋದ್ದೇಶದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಎನ್.ಎನ್.ಶ್ರೀಧರ್, ಶಂಕರಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸಂಗೀತ ನಿರ್ದೇಶಕ ಹಾರ್ಮೋನಿಯಂ ಗಂಗಾಧರ್ ರೈತಗೀತೆ ಹಾಡುವ ಮೂಲಕ ಪ್ರಾರ್ಥಿಸಿದರು. ಹನುಮಂತರಾಯಪ್ಪ ಕಾರ್ಯಕ್ರಮ ನಿರೂಪಿಸಿದರು.

Leave a Comment