ಬೆಳೆಸಾಲ ಸಂಪೂರ್ಣ ಮನ್ನಾಕ್ಕೆ ಆಗ್ರಹಿ ಪ್ರತಿಭಟನೆ

ರಾಯಚೂರು.ಆ.15- ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ನೀಡಿದ ಭರವಸೆ ಈಡೇರಿಸುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸ್ಥಳೀಯ ಮಹಾತ್ಮಾಗಾಂಧಿ ಪುತ್ಥಳಿ ಬಳಿ ಕಪ್ಪುಪಟ್ಟಿ ಧರಿಸಿ, ಮೌನ ಪ್ರತಿಭಟನೆ ನಡೆಸಿತು.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ವೆಂಕಟರಾವ್ ನಾಡಗೌಡ ಅವರಿಗೆ ಮನವಿ ಸಲ್ಲಿಸಿ, ಮುಖ್ಯಮಂತ್ರಿಗಳು ನೀಡಿದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರೈತರ ಎಲ್ಲಾ ಬೆಳೆ ಸಾಲ ಮನ್ನಾ ಮಾಡಿ ರೈತರ ಋಣ ತೀರಿಸಬೇಕು. ತುಂಗಭದ್ರ ಮತ್ತು ನಾರಾಯಣಪುರ ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ಅಕ್ರಮ ನೀರು ಕಬಳಿಸುತ್ತಿರುವುದನ್ನು ತಡೆದು ಉಪ ಕಾಲುವೆಗಳ ಸಮರ್ಪಕ ದುರಸ್ತಿ ಮಾಡಬೇಕು. 2016ರಲ್ಲಿ ಬೆಳೆ ವಿಮೆ ಹಣ ಪಾವತಿಸಿದ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು.
ತುಂಗಭದ್ರ ಅಡದಂಡೆ ನಾಲೆ ಟಾಸ್ಕ್‌ವರ್ಕ್ ನೌಕರರ ಸಮಸ್ಯೆ ಬಗೆಹರಿಸಬೇಕು ಮತ್ತು ಜಿಲ್ಲೆ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಚಾಮರಸ ಮಾಲೀಪಾಟೀಲ್, ಅಮರಣ್ಣ ಗುಡಿಹಾಳ, ದೊಡ್ಡಬಸನಗೌಡ ಬಲ್ಲಟಗಿ, ಲಕ್ಷ್ಮಣಗೌಡ, ಸೂಗೂರಯ್ಯ ಆರ್.ಎಸ್.ಮಠ, ಜಯಪ್ಪ ಸ್ವಾಮಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment