ಬೆಳಗೆರೆ ಕೃಷ್ಣಶಾಸ್ತ್ರಿಗಳ ನೆನಪು

ಐದೂಕಾಲು ಅಡಿ ಎತ್ತರದ ನಮ್ರತೆಯನ್ನು ಸೂಚಿಸುವಂತಹ ಸ್ವಲ್ಪ ಬಾಗಿದ ಭಂಗಿಯಿಂದಾಗಿ ಅಷ್ಟು ಎತ್ತರವೆನಿಸದ ಶಾಸ್ತ್ರಿಗಳ ಎತ್ತರದ ಬದುಕಿನ ವಿವರಗಳನ್ನು ಹಿಡಿದಿಡುವುದು ಯಾರಿಗೇ ಅಸಾಧ್ಯವೇ, ಬದುಕಿನ ಪ್ರತಿ ಕ್ಷಣವನ್ನು ಅರ್ಥಪೂರ್ಣವಾಗಿಯೇ ಬದುಕಿದ ಈ ಚೇತನದ 97 ವರ್ಷಗಳ ಪ್ರತಿಯೊಂದು ವಿವರಗಳು ಇನ್ನೊಬ್ಬರನ್ನು ಮುನ್ನಡೆಸಬಲ್ಲಂತಹವಾಗಿದ್ದವು. ಇವು ಪ್ರಾತಿನಿಧಿಕವಾಗಿರುವಂತೆಯೇ ಕೆಲವು ಜೀವನ ತತ್ವಗಳನ್ನು ನಮಗರಿವಿಲ್ಲದೆಯೇ ಕಲಿಸುವಂತಹವಾಗಿದ್ದವು ಎಂಬುದು ಅವರ ವ್ಯಕ್ತಿತ್ವದ ವಿಶೇಷ. ಶೂನ್ಯದಿಂದ ಸಂಪಾದನೆ ಎಂಬಂತಹ ಹೊಸ ಸೂತ್ರವನ್ನು ಅವರು ನಾಡಿಗೆ ನೀಡಿದರಷ್ಟೇ ಅಲ್ಲ. ಅದು ಯಾರೇ ಅನುಸರಿಸಬಹುದಾದಂತಹ ಸರಳ ಸೂತ್ರವಾಗಿದ್ದರಿಂದ ಈ ಸಮಾಜದ ಒಳಿತನ್ನು ಬಯಸುವ ಎಲ್ಲರಿಗೂ ಮಾರ್ಗದರ್ಶಿ ಸೂತ್ರವಾಗಿದೆ. ಅವರು ವಿನೋಬಾಜಿಯವರಂತೆ ಒಂದು ಹೊಸ ಪ್ರಕ್ರಿಯೆಯನ್ನು ಕಂಡು ಹಿಡಿದು ಅದನ್ನು ಸಮಾಜ ಕಲ್ಯಾಣಕ್ಕಾಗಿ ಬಳಸಿಕೊಂಡರು. ತಾವು ಹೋದಲ್ಲೆಲ್ಲಾ ದಿ. ವಿಶ್ವೇಶ್ವರಯ್ಯನವರು ಸೂಚಿಸಿದ್ದಂತೆ `ಅಧ್ಯಾಪಕನಾದವನು ಒಂದು ಗ್ರಾಮದ ದೀಪವಾಗಬೇಕು’ ಎಂಬ ಆದೇಶವನ್ನು ನಿಷ್ಠೆಯಿಂದ ಪಾಲಿಸಿದರು.

ಆಯಾ ಗ್ರಾಮಗಳಲ್ಲಿ ಅಗತ್ಯವಾಗಿದ್ದ ಶಾಲೆ, ಆಸ್ಪತ್ರೆ, ಪ್ರಾರ್ಥನಾ ಮಂದಿರ, ರಸ್ತೆ ಮುಂತಾದವುಗಳನ್ನು ಗ್ರಾಮಸ್ಥರ ಸಹಾಯದೊಂದಿಗೆ ರಚಿಸಿ ಗ್ರಾಮಗಳು ಸ್ವಾವಲಂಬಿಗಳಾಗಬೇಕು ಎಂಬ ಗಾಂಧಿ ತತ್ವವನ್ನು ಸಾಕ್ಷಾತ್ಕಾರಗೊಳಿಸಿದವರು. ಜೊತೆಗೆ ಇದು ಅರ್ಥಶಾಸ್ತ್ರದ ಹೊಸ ಪರಿಭಾಷೆಗೆ ಕಾರಣವಾಯಿತೆಂಬುದರ ವಿವರಗಳನ್ನು ಗಮನಿಸುವುದು ಸೂಕ್ತ. ಸಾಮಾನ್ಯವಾಗಿ `ಆಸ್ತಿ’ಯು ಅದಕ್ಕೆ ಮಾಡಿದ ಖರ್ಚಿನ ಆಧಾರದ ಮೇಲೆ ಅದಕ್ಕೆ ಒಂದು ಬೆಲೆ ನಿರ್ಧರಿತವಾಗುತ್ತದೆ ಮತ್ತು ದಿನಗಳೆದಂತೆ ಅದು ಹೆಚ್ಚುತ್ತಲೇ ಹೋಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಶಾಸ್ತ್ರಿಗಳು ತಮ್ಮ ಸಂಸ್ಥೆಗೆ ಅಗತ್ಯವಾಗಿರುವ ಎಲ್ಲ ಕಟ್ಟಡಗಳನ್ನು ಕಟ್ಟಿ ಮುಗಿಸಿದ ಸಂದರ್ಭದಲ್ಲಿ ಅವುಗಳ ಮೌಲ್ಯಮಾಪನ ಮಾಡಿದಾಗ ಅವುಗಳ ಬೆಲೆ ಸುಮಾರು ಒಂದೂವರೆ ಕೋಟಿ ಎಂದು ಅಂದಾಜಿಸಲಾಯಿತು. ಎಂದರೆ ತಮ್ಮ ಸಾಧನೆಯಿಂದ ಶಾಸ್ತ್ರಿಗಳು ತಮ್ಮ ಸಂಸ್ಥೆಗೆ ಬೇಕಾದ ಕಟ್ಟಡಗಳ ಅಗತ್ಯವನ್ನು ಪೂರೈಸುತ್ತಲೇ ಸಹಜವಾಗಿ ಅದಕ್ಕೆ ಉತ್ತಮ ಮೌಲ್ಯದ ಆಸ್ತಿಯ ಸೌಕರ್ಯವು ಸಿಗುವಂತೆ ಮಾಡಿದರು. ಈಗ ಮುಗಿದ ಕಟ್ಟಡಗಳ ಬೆಲೆ ಒಂದೂವರೆ ಕೋಟಿ ರೂಪಾಯಿ ಇರಬಹುದು. ಆದರೆ, ಶಾಸ್ತ್ರಿಗಳು ಅದಕ್ಕೆ ಖರ್ಚು ಮಾಡಿದ್ದೆಷ್ಟು ಎಂಬುದನ್ನು ಪರಿಗಣಿಸಿದಾಗ ಈ ಆರ್ಥಿಕ ಪವಾಡದ ಅರ್ಥ ನಮಗಾಗುತ್ತದೆ.

ತಮ್ಮ `ಶ್ರಮದಾನ’ದಯೋಜನೆ, ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣಗಳಿಂದಾಗಿ ಅವರು ಅದಕ್ಕೆ ವ್ಯಯಿಸಿದ್ದು ಬಹುಶಃ ಅದರ ಮೌಲ್ಯದ ಶೇ. 35 ರಿಂದ ಶೇ. 40 ಮಾತ್ರ. ಹಾಗಾಗಿ ಸಂಸ್ಥೆಯ ಲೆಕ್ಕಪತ್ರಗಳನ್ನು ನೋಡಿದಾಗ ಆದಾಯವಿಲ್ಲದೆ ಆಸ್ತಿ ಸೃಷ್ಟಿಯಾಗಿದ್ದರ ಬಗ್ಗೆ ಅನುಮಾನ ಮೂಡುತ್ತದೆ. ವಾಸ್ತವದಲ್ಲಿ ವರಮಾನ್ಯ ಆಯುಕ್ತರ ವಿಭಾಗವು ಇದನ್ನು ಪ್ರಶ್ನಿಸಿ ಆದಾಯದ ಮೂಲವನ್ನು ಮುಚ್ಚಿಟ್ಟಿರಬಹುದಾದ ಸಾಧ್ಯತೆಯನ್ನು ಸಂಶಯಿಸಿದ್ದರು. ಅವರಿಗೂ ಶಾಸ್ತ್ರಿಗಳ `ಆರ್ಥಿಕ ಅನ್ವೇಷಣೆ’ಯ ಅರಿವಾದದ್ದು ಅದರ ವಿವರಗಳನ್ನು ಅರಿತಾಗಲೇ. ಇಲ್ಲಿ ಶ್ರಮದಾನದಂತಹ ಪ್ರಕ್ರಿಯೆಗಳಿಂದ ಹಣ ಖರ್ಚಾಗದಿದ್ದರೂ ಆ ಪರಿಶ್ರಮದ ಬೆಲೆ ಸಹಜವಾಗಿ ಆಸ್ತಿಗೆ ಸೇರಿಕೊಳ್ಳುವುದರಿಂದ ಅದರ ಮೌಲ್ಯವರ್ಧನೆಯಾಗುತ್ತದೆ. ಹೀಗಾಗಿ 50 ರಿಂದ 60 ಲಕ್ಷ ರೂ.ಮಾತ್ರ ಖರ್ಚಾದರೂ ಅದರ ಮಾರುಕಟ್ಟೆಯ ಬೆಲೆ ಒಂದೂ ಕಾಲನಿಂದ ಒಂದೂವರೆ ಕೋಟಿ ರೂ. ಆಗಿಬಿಡುತ್ತದೆ. ಇದು `ಶೂನ್ಯ ಸಂಪಾದನೆ’ಯಲ್ಲ. ಶೂನ್ಯದಿಂದ ಸಂಪಾದನೆ, ಬೆಲೆಯಿಲ್ಲದ್ದಕ್ಕೆ ಬೆಲೆ ತಂದು ಕೊಡುವ ಇಂತಹ ಪ್ರಯೋಗಗಳೇ ನಮ್ಮ ದೇಶವನ್ನು ಮುನ್ನಡೆಸಬೇಕೆಂದು ಗಾಂಧೀಜಿ ಬಯಸಿದ್ದರು. ಅದನ್ನು ಅವರ ಶಿಷ್ಯರೊಬ್ಬರು ಎಲ್ಲರೂ ಆಶ್ಚರ್ಯ ಪಡುವಂತೆ ಸಾಧಿಸಿ ತೋರಿಸಿದರು.

ಶ್ರೀ ಶಾಸ್ತ್ರಿಗಳು ಬಿಳಿಯ ಬಟ್ಟೆಯನ್ನು ಧರಿಸಿರುವ ಸನ್ಯಾಸಿ. ಆತನ ತಲೆ ಬೋಳಿಸಿಲ್ಲದಿರಬಹುದು. ಮನ ಬೋಳಾಗಿದೆ. ತನ್ನ ತೋಟದ ಮಧ್ಯದಲ್ಲಿ ಒಂದು ಗುಡಿಸಲನ್ನು ನಿರ್ಮಿಸಿಕೊಂಡು ಅಲ್ಲಿ ವಾಸಿಸುತ್ತಿರುವ ಈತ `ಪದ್ಮ ಪತ್ರ ಮಿವಾಂಭಸ’ನಂತೆ ಬಾಳುತ್ತಿದ್ದಾರೆ. ಆತನ ಮನೆಗೆ ಬಾಗಿಲಿಲ್ಲ. ಪೆಟ್ಟಿಗೆಗೆ ಬೀಗವಿಲ್ಲ.

ಮನೆ ಸುದಾಮನ ಮನೆಯಾದ್ದರಿಂದ ಕಳ್ಳತನದ ಭಯವಿಲ್ಲ. ನಾಳೆಗೇನು ಎಂಬ ಅಳುಕಿಲ್ಲ ಅವರ ನಿದ್ದೆ ನಿರ್ಗವಿ. ಹಾಸಿಗೆ ಬೇಡ, ಹೊದಿಕೆ ಬೇಡ, ಎಲ್ಲೆಂದರೆ ಅಲ್ಲಿ ಹೇಗೆಂದರೆ ಹಾಗೆ ಅವರನ್ನು ಗಾಢವಾಗಿ ಆಲಂಗಿಸುತ್ತದೆ. `ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ದೆ’ ಎಂಬ ಹಾಗೆ ಆತನಲ್ಲಿ ಜಡ ಸ್ವಭಾವವನ್ನು ಆರೋಪಿಸುವಂತಿಲ್ಲ. ಧ್ಯಾನದಿಂದ ಬಹಿರ್ಮುಖನಾದಾಗ ಆತ ಪಾದರಸದಷ್ಟು ಚುರುಕು. ಇದನ್ನು ಆತನ ಹತ್ತಿರವಿದ್ದೇ ಅರ್ಥ ಮಾಡಿಕೊಳ್ಳಬೇಕು ಏನು ಅರ್ಥ ಮಾಡಿಕೊಳ್ಳಬೇಕೋ!…

ತಮಗೆ ಅರ್ಥವಾಗದಂತೆ ಶಾಸ್ತ್ರಿಗಳ ವ್ಯಕ್ತಿತ್ವ ಇತ್ತು ಎಂಬುದು ತ.ಸು. ಶಾಮರಾಯರ ವಿನಯವಂತಿಕೆಯನ್ನು ತೋರಿಸುತ್ತದೆಯೇ ಹೊರತು ಶಾಸ್ತ್ರಿಗಳು ಎಂತಹ ಸಾಮಾನ್ಯರಲ್ಲೂ ತಮ್ಮ ವ್ಯಕ್ತಿತ್ವದ ವಿಶಿಷ್ಟತೆಯ ಛಾಪನ್ನು ಮೂಡಿಸಿದ್ದರು ಎಂಬುದಕ್ಕೆ ಅನೇಕ ಘಟನೆಗಳು ಸಾಕ್ಷಿಯಾಗಿವೆ.

ಶಾಸ್ತ್ರಿಗಳ ವ್ಯಕ್ತಿತ್ವದ ಪರಿಯನ್ನು ವಿವರಿಸಬಹುದಾದ ಒಂದು ವಾಕ್ಯವೆಂದರೆ `ಅತ್ಯತಿಷ್ಠದ್ದಶಾಂಗುಲಮ್’. ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮಾಡಬಹುದಾದ ಕೆಲಸವಿಷ್ಟೇ. ಅವರು ನಂಬಿಕೊಂಡು ಬಂದ ಧ್ಯೇಯೋದ್ದೇಶಗಳಿಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವುದು.

Leave a Comment