ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ : ಲಕ್ಷ್ಮಿ ಗೆದ್ದು ಜಾರಕಿಹೊಳಿ ಸಹೋದರರಿಗೆ ಗುದ್ದು

ಬೆಳಗಾವಿ, ಸೆ. ೭- ತೀವ್ರ ವಾದ – ವಿವಾದಕ್ಕೆ ಎಡೆಮಾಡಿಕೊಟ್ಟು ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಿದ್ದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ನಿರೀಕ್ಷೆಯಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಪಾಲಾಗಿದೆ.

ಅಧ್ಯಕ್ಷರಾಗಿ ಮಹದೇವ್ ಪಾಟೀಲ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಾಪು ಸಾಹೇಬ ಜಮಾದಾರ್ ಸ್ಥಾನವೂ ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಒಲಿದಿದ್ದು, ಸಚಿವ ಜಾರಕಿಹೊಳಿ ಬಣಕ್ಕೆ ಮುಖಭಂಗವಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಸಂಧಾನದ ಫಲವಾಗಿ ಜಾರಕಿಹೊಳಿ ಸಹೋದರರಾದ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಬಣದಿಂದ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಮಹದೇವ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಅಧಿಕೃತವಾಗಿ ಪ್ರಕಟಿಸುವುದೊಂದೇ ಬಾಕಿ ಉಳಿದಿದೆ.

ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರನ್ನು ತಮ್ಮ ಬಣದ ನಿರ್ದೇಶಕರಿಗೆ ಕೊಡಿಸಲು ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಹಠಕ್ಕೆ ಬಿದ್ದಿದ್ದರು. ಇದರಿಂದಾಗಿ ಪರ – ವಿರೋಧ ಎದುರಾಗಿ ಪರಸ್ಪರ ಏಕವಚನದಲ್ಲಿ ಆರೋಪ – ಪ್ರತ್ಯಾರೋಪ ಮಾಡಿಕೊಂಡಿದ್ದರು.

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅತೃಪ್ತಿ, ಅಸಮಾಧಾನ ಭಿನ್ನಮತ ಸಮ್ಮಿಶ್ರ ಸರ್ಕಾರಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎನ್ನುವುದನ್ನು ಮನಗಂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು, ಖುದ್ದು ಬೆಳಗಾವಿಗೆ ತೆರಳಿ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಸೂಚನೆ ನೀಡಿದ್ದರು.

ಅದರಂತೆ ಖಂಡ್ರೆ ಬೆಳಿಗ್ಗೆಯೇ ಬೆಳಗಾವಿ ತಲುಪಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಕುಟುಂಬದ ಸಹೋದರರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬೆಳಗಾವಿಯ ಕಾಂಗ್ರೆಸ್ ಬಿಕ್ಕಟ್ಟು ಬಗೆಹರಿದಿದೆ.

ಬೂದಿ ಮುಚ್ಚಿದ ಕೆಂಡದಂತಿರುವ ಇಬ್ಬರು ನಾಯಕರ ಅತೃಪ್ತಿ, ಅಸಮಾಧಾನ ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಬಿಗಿ ಭದ್ರತೆ

ಪಿಎಲ್‌ಡಿ ಚುನಾವಣೆ ಹಿನ್ನೆಲೆಯಲ್ಲಿ 9 ಮಂದಿ ನಿರ್ದೇಶಕರು, ಪೊಲೀಸ್ ಬಿಗಿ ಭದ್ರತೆಯಲ್ಲಿ ಬ್ಯಾಂಕ್‌ನ ಆವರಣಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಆಗಮಿಸಿದರು. ಹೆಬ್ಬಾಳ್ಕರ್ ಬಣದಿಂದ ಮಹದೇವ್ ಪಾಟೀಲ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 14 ನಿರ್ದೇಶಕರು ಪಿಎಲ್‌ಡಿ ಬ್ಯಾಂಕ್‌ನಲ್ಲಿ ಜಾರಕಿಹೊಳಿ ಸಹೋದರರ ಬಣದಲ್ಲಿ ಐವರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಬಣದಲ್ಲಿ 9 ಮಂದಿ ನಿರ್ದೇಶಕರಿದ್ದರು. ಹೀಗಾಗಿ ಬಹುಮತದ ಆಧಾರದ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಗೆಲುವು ಸಿಕ್ಕಿದೆ.

ಬೆಳಗಾವಿಯ ಸರ್ಕೂಟ್ ಹೌಸ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ, ಸಮಸ್ಯೆ ಬಗೆಹರಿಸುವ ಸಂಬಂಧ, ಒಳಗಡೆ ಸಭೆ ನಡೆಯುತ್ತಿದ್ದರೆ, ಹೊರಗಡೆ ಸತೀಶ್ ಜಾರಕಿಹೊಳಿ ಬೆಂಬಲಿಗರು, ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಸಮಸ್ಯೆ ಬೂದಿ ಮುಚ್ಚಿದ ಕೆಂಡದಂತಿದೆ.

Leave a Comment