ಬೆಳಗಾವಿಯಲ್ಲಿ ಶಂಕಿತ ಎಲ್ಲಾ 27 ಕೊರೊನವೈರಸ್‍ ಸೋಂಕು ದೃಢಪಟ್ಟಿಲ್ಲ-ಜಿಲ್ಲಾಧಿಕಾರಿ

ಬೆಳಗಾವಿ, ಏ 3 – ಜಿಲ್ಲೆಯಲ್ಲಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಎಲ್ಲಾ 27 ಶಂಕಿತ ಕೊರೊನಾವೈರಸ್ (ಕೊವಿದ್ -19) ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಶಂಕಿತ 27 ಪ್ರಕರಣಗಳ ಪೈಕಿ 21 ಪ್ರಕರಣಗಳು ಕೆಲ ದಿನಗಳ ಹಿಂದೆಯೇ ಸೋಂಕು ಇಲ್ಲದಿರುವ ಪರೀಕ್ಷಾ ವರದಿ ಬಂದಿದೆ. ಉಳಿದ ಆರು ಪ್ರಕರಣಗಳ ಪರೀಕ್ಷಾ ವರದಿಯನ್ನು ಗುರುವಾರ ಸಂಜೆ ಪಡೆಯಲಾಗಿದೆ. ಎಲ್ಲಾ 27 ಶಂಕಿತ ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಕಳೆದ ರಾತ್ರಿ ಇಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜನರು ಆತಂಕ ಪಡದೆ, ಆಡಳಿತಕ್ಕೆ ಸಹಕರಿಸಬೇಕು. ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ಒಟ್ಟು 62 ಜನರು ಭಾಗವಹಿಸಿದ್ದು, ಎಲ್ಲರನ್ನು ಗುರುತಿಸಲಾಗಿದೆ. ವೈದ್ಯಕೀಯ ತಪಾಸಣೆಯ ನಂತರ ಅವರಲ್ಲಿ ಯಾರೊಬ್ಬರಿಗೂ ಕೊವಿದ್‍-19 ಸೋಂಕು ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ ಎಂಬುದಾಗಿ ಬೊಮ್ಮನಹಳ್ಳಿ ಹೇಳಿದ್ದಾರೆ.
ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡು 33 ಜನರ ರಕ್ತ ಮತ್ತು ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿವೆ. ರೋಗ ತೀವ್ರತೆ ಕಾಣಿಸಿಕೊಂಡಿರುವ 42 ಜನರನ್ನು ಮುನ್ನೆಚ್ಚರಿಕೆಯಾಗಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಬಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ 62 ಜನರನ್ನು ಗುರುತಿಸಲಾಗಿದೆ. ಇತರರು ದೆಹಲಿ ಸಭೆಗೆ ಹೋಗಿ ಬಂದಿದ್ದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಇಲ್ಲವೇ ತಹಸೀಲ್ದಾರ್‌ ಅವರಿಗೆ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಬೊಮ್ಮನಹಳ್ಳಿ ಅವರು ಹೇಳಿದ್ದಾರೆ.

Leave a Comment