ಬೆಲ್ ಬಾಟಂ’ ಸಖತ್ ಬಾಳಿಕೆ ಗುರು!

ಬೆಂಗಳೂರು, ಜೂ 20 -ಖ್ಯಾತ ನಿರ್ದೇಶಕ, ನಾಯಕ ನಟ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಜೋಡಿಯ ‘ಬೆಲ್ ಬಾಟಂ’ 125 ದಿನ ಪೂರೈಸಿದ ನಂತರವೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಉತ್ತಮ ಕಥಾಹಂದರವಿದ್ದರೆ, ಚಿತ್ರ ರಸಿಕರು ಆಸ್ವಾದಿಸುವುದು ಖಚಿತ ಎಂಬುದನ್ನು ನಿರ್ದೇಶಕ ಜಯತೀರ್ಥ ಸಾಬೀತುಪಡಿಸಿದ್ದಾರೆ.

ಫೆಬ್ರವರಿ 15 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಅರ್ಧ ಶತಕ, ಶತಕ ಬಾರಿಸಿ, 125 ದಿನ ಪೂರೈಸಿದೆ. ಕಳೆದ ವಾರ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿದ್ದರೂ ಸಹ  ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾದ ಪ್ರದರ್ಶನ ಕಾಣುತ್ತಿದೆ.  1980 ರ ದಶಕದ ಕಥೆಯನ್ನು ಸೊಗಸಾಗಿ ಕಟ್ಟಿಕೊಟ್ಟಿರುವ ಚಿತ್ರತಂಡ, ಪ್ರೇಕ್ಷಕರ ಪ್ರೋತ್ಸಾಹದಿಂದ ಸಂಭ್ರಮಿಸಿದೆ.

ಸಿನಿಮಾದ ಈ ಮಟ್ಟದ ಗೆಲುವಿನಲ್ಲಿ ಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ, ನಟನೆ ಹೀಗೆ ಎಲ್ಲವೂ ಸಾಥ್ ನೀಡಿದೆ. ‘ಬೊಗಸೆ ತುಂಬ ಆಸೆ ತುಂಬಿದೆ’ ಹಾಡು ಗುನುಗುವಂತಿದೆ.

ಕಳೆದ ವರ್ಷ ‘ಟಗರು’ ಸಿನಿಮಾ 125 ದಿನ ಓಡಿತ್ತು. ಅದರ ಬಳಿಕ ಈ ವರ್ಷ ‘ಬೆಲ್ ಬಾಟಂ’ ಆ ಸಾಧನೆ ಮಾಡಿದೆ. ಈ ವರ್ಷ 125 ದಿನ ಪೂರೈಸಿದ ಮೊದಲ ಸಿನಿಮಾ ಇದಾಗಿದೆ.    ಈ ಸಂಭ್ರಮದ ನಡುವೆಯೇ ಜಯತೀರ್ಥ ಸದ್ಯದಲ್ಲೇ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ.

Leave a Comment