ಬೆಲ್ಜಿಯಂ ವಿರುದ್ಧ ಏಕೈಕ ಗೋಲಿನ ಗೆಲುವು : ಫಿಫಾ ವಿಶ್ವಕಪ್ : ಫೈನಲ್ ಫೈಟ್ ಫ್ರಾನ್ಸ್

ರಷ್ಯಾ: ಸ್ಯಾಮುವೆಲ್ ಉಮಿಟ್ಟಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ರೋಚಕವಾಗಿ ಮಣಿಸಿದ ಫ್ರಾನ್ಸ್, ೨೦ ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.

ಸೈಂಟ್ ಪೀಟರ್‍ಸ್‌ಬರ್ಗ್ ಸ್ಟೆಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳೆದುರು ನಡೆದ ಜಿದ್ದಾಜಿದ್ದಿನ ಉಪಾಂತ್ಯ ಹಣಾಹಣಿಯಲ್ಲಿ, ೫೧ನೇ ನಿಮಿಷದಲ್ಲಿ ದೊರಕಿದ ಕಾರ್ನರ್ ಅವಕಾಶವನ್ನು ಫ್ರಾನ್ಸ್ ಗೋಲಾಗಿ ಪರಿವರ್ತಿಸಿತು. ಸ್ಟಾರ್ ಸ್ಟ್ರೈಕರ್ ಆಂಟೋನಿಯೋ ಗ್ರೀಝ್ಮನ್ ಕಾರ್ನರ್‌ನಿಂದ ಕಳುಹಿಸಿದ ಚೆಂಡನ್ನು, ಹೆಡರ್ ಮೂಲಕ ಯಶಸ್ವಿಯಾಗಿ ಗುರಿ ಮುಟ್ಟಿಸಿದ ಬಾರ್ಸಿಲೋನಾದ ಸೆಂಟರ್ ಬ್ಯಾಕ್ ಆಟಗಾರ ಸ್ಯಾಮುವೆಲ್ ಉಮಿಟ್ಟಿ, ಫ್ರಾನ್ಸ್ ಪಾಲಿಗೆ ಹೀರೋ ಆದರು.

ಮೊದಲಾರ್ಧದಲ್ಲಿ ಯಾವುದೇ ಗೋಲು ಕಾಣದ ಪಂದ್ಯದಲ್ಲಿ, ಉಭಯ ತಂಡಗಳು ಅಟ್ಯಾಕಿಂಗ್ ಅಟಕ್ಕೆ ಒತ್ತು ನೀಡಿದ್ದವು. ಗೋಲು ದಾಖಲಾದ ಬಳಿಕ ಫ್ರಾನ್ಸ್ ಕೋಚ್ ದಿದಿಯರ್ ಡೆಸ್ಕಾಂಪ್ಸ್,  ರಣತಂತ್ರವನ್ನು ಬದಲಾಯಿಸಿ, ಗೋಲಿನ ಮುನ್ನಡೆಯನ್ನು ಉಳಿಸಿಕೊಂಡು ಎದುರಾಳಿಗಳಿಗೆ ಸಮಬಲ ಸಾಧಿಸಲು ಯಾವುದೇ ಅವಕಾಶ ದೊರೆಯದ ಹಾಗೆ, ಫಾರ್ವರ್ಡ್ ಬದಲು ಡಿಫೆನ್ಸ್ ವಿಭಾಗವನ್ನು ಹೆಚ್ಚು ಬಲಪಡಿಸಿದರು. ಸಮಬಲ ಸಾಧಿಸಲು ಬೆಲ್ಜಿಯಂ ಆಟಗಾರರು ನಡೆಸಿದ ಎಲ್ಲಾ ಪ್ರಯತ್ನಗಳೂ ವಿಫಲವಾದವು.

ಪಂದ್ಯದ ಪ್ರತಿಯೊಂದು ವಿಭಾಗದಲ್ಲೂ ಬೆಲ್ಜಿಯಂ, ಫ್ರಾನ್ಸ್ ವಿರುದ್ಧ ಮೇಲುಗೈ ಸಧಿಸಿತ್ತು. ಶೇ. ೬೪ರಷ್ಟು ಸಮಯ ಚೆಂಡಿನ ಮೇಲೆ ನಿಯಂತ್ರಣ ಹೊಂದಿದ್ದ ಬೆಲ್ಜಿಯಂ, ಶೇ.೯೧ರಷ್ಟು ನಿಖರತೆಯೊಂದಿಗೆ ೫೯೪ ಪಾಸ್‌ಗಳನ್ನು ದಾಖಲಿಸಿತ್ತು. ಆದರೆ ಫ್ರಾನ್ಸ್ ನಾಯಕ, ಗೋಲ್ ಕೀಪರ್ ಹ್ಯೋಗೋ ಲಾರಿಸ್ ರಚಿಸಿದ ರಕ್ಷಣಾ ವ್ಯೂಹವನ್ನು ದಾಟಲು ಮಾತ್ರ ಬೆಲ್ಜಿಯಂನಿಂದ ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಕಳೆದ ಪಂದ್ಯದ ಅಮೋಘ ಪ್ರದರ್ಶನವನ್ನು ಪುನರಾವರ್ತಿಸಿದ ಬೆಲ್ಜಿಯಂ ಗೋಲ್ ಕೀಪರ್, ಕಾರ್ಟೋಯ್ಸ್, ಅತ್ಯದ್ಭುತ ಸೇವ್‌ಗಳ ಮೂಲಕ ಮಿಂಚಿದರು. ಗೋಲ್ ಪೋಸ್ಟ್‌ನೆಡೆಗೆ ಗುರಿಯಾಗಿಸಿ ಫ್ರಾನ್ಸ್‌ನ ಆಟಗಾರರು ನಡೆಸಿದ ಐದು ಪ್ರಯತ್ನಗಳಲ್ಲಿ ನಾಲ್ಕು ಬಾರಿಯೂ ಕಾರ್ಟೋಯ್ಸ್ ಕೈಗಳಲ್ಲಿ ಚೆಂಡು ಭದ್ರವಾಗಿತ್ತು.

ಲುಝ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಫೈನಲ್ ಫೈಟ್‌ನಲ್ಲಿ, ಇಂಗ್ಲೆಂಡ್ ಹಾಗೂ ಕ್ರೊವೇಷಿಯಾ ಪಂದ್ಯದ ವಿಜೇತರನ್ನು ಫ್ರಾನ್ಸ್ ಎದುರಿಸಲಿದೆ. ಇಂದು ನಡೆಯುವ ದ್ವಿತೀಯ ಸೆಮಿ ಫೈನಲ್‌ನಲ್ಲಿ ಸೋತ ತಂಡವನ್ನು ಮೂರನೇ ಸ್ಥಾನಕ್ಕಾಗಿ ಶನಿವಾರ ನಡೆಯುವ ಪಂದ್ಯದಲ್ಲಿ ಬೆಲ್ಜಿಯಂ ಎದುರಿಸಲಿದೆ.

Leave a Comment