ಬೆಲೆ ಕುಸಿತ: ಟೊಮಾಟೋ ಬೀದಿಗೆ ಎಸೆದ ರೈತ

(ರಾಚಯ್ಯ ಸ್ವಾಮಿ ಮಾಚನೂರು)
ರಾಯಚೂರು.ಜ.25- ಕಷ್ಟ ಪಟ್ಟು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೋಸಿಹೋದ ರೈತನೋರ್ವ ಮಾರುಕಟ್ಟೆಗೆ ತಂದ ಟೊಮಾಟೋವನ್ನು ಬೀದಿಗೆ ಎಸೆದ ಘಟನೆ ಇತ್ತೀಚಿಗೆ ನಡೆದಿದೆ.
ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತದೆ. ಆದರೆ, ನಿನ್ನೆವರೆಗೆ ಒಳ್ಳೆಯ ಬೆಳೆ ಇದ್ದ ಟೊಮಾಟೋಗೆ ಇಂದು ಪುಟ್ಟಿಗೆ ಕೇವಲ 2 ರೂ. ಮಾತ್ರ ಬೆಲೆ ನಿಗದಿ ಮಾಡಲಾಗಿದೆ. ಕನಿಷ್ಠ 3 ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೆದ್ದ ರೈತನೋರ್ವ, ನಿಮಗೆ ಬೇಕಾಬಿಟ್ಟಿ ದರಕ್ಕೆ ನೀಡುವುದಕ್ಕಿಂತ ರಸ್ತೆಗೆಸೆಯುವುದೇ ಲೇಸು ಎಂದು ಈ ರೀತಿ ಮಾಡಿದ್ದಾನೆ.
ತಾಲೂಕಿನ ಚಂದ್ರಬಂಡಾ ಹೋಬಳಿಯ ಹಳ್ಳಿಗಳಲ್ಲಿ ಟೊಮಾಟೋ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು ಈ ಬಾರಿ ಹೆಚ್ಚು ಬೆಳೆ ಬಂದ ಕಾರಣ, ರೈತರು ಖುಷಿಯಿಂದ ಮಾರುಕಟ್ಟೆಗೆ ತಂದರೂ, ಬೆಂಬಲ ಬೆಲೆ ದೊರೆಯುತ್ತಿಲ್ಲ. ಪ್ರತಿವರ್ಷ ಜಿಲ್ಲೆಯಿಂದ ನಗರದ ವಿವಿಧ ಮಾರುಕಟ್ಟೆ ಹಾಗೂ ಆಂಧ್ರಾ ಮತ್ತು ತೆಲಂಗಾಣಕ್ಕೆ ರಫ್ತಾಗುತ್ತಿತ್ತು ಆದರೆ, ಆಂಧ್ರಾ ಮತ್ತು ತೆಲಂಗಾಣ ಭಾಗದಲ್ಲಿ ಬೆಳೆದ ಕಾರಣದಿಂದಾಗಿ ಕೆ.ಜಿ.ಗೆ 2 ರೂ.ನಂತೆ ತೆಗೆದುಕೊಳ್ಳುತ್ತಿದ್ದಾರೆ. ಸಗಟು ವ್ಯಾಪಾರ ಮಾಡಿದರೆ, 20 ಕೆ.ಜಿಗೆ 10 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ರೈತ ಕಣ್ಣೀರಿನಿಂದ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ.
ರೈತರು ಖರ್ಚು ಮಾಡಿದ ಹಣವನ್ನು ಪಡೆಯಲು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದಾಗಿ ನೊಂದ ರೈತರು ಜಿಲ್ಲೆಯ ಅಕ್ಕ-ಪಕ್ಕದ ಜನರಿಗೆ, ಕೂಲಿಕಾರ್ಮಿಕರಿಗೆ, ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮಾಟೊ ನೀಡುತ್ತಿದ್ದಾರೆ. ಆದರೂ, ಉಳಿದ ಟೊಮಾಟೋಗಳನ್ನು ಬೀದಿಗೆ ಎಸೆದು ತೆರಳುತ್ತಿದ್ದಾರೆ. ಒಂದು ಎಕರೆ ಟೊಮೋಟೊ ಬೆಳೆಯಲು ಕನಿಷ್ಠ 30 ರಿಂದ 40 ಸಾವಿರ ರೂ. ಖರ್ಚಾಗುತ್ತದೆ. ಹಗಲಿರುಳೆನ್ನದೆ ನೀರು ಕಟ್ಟಬೇಕು. ಮುದುರು, ಬೂದು ರೋಗ ಕಾಟವಿದ್ದು ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕಿದೆ. ಇಲ್ಲವಾದರೆ ಬೆಳೆಯೇ ಕೈಗೆಟುಕುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ. ದರವಿದ್ದರೂ ರೈತರಿಗೆ ಮಾತ್ರ ಇದರ ಅರ್ಧದಷ್ಟೂ ಬೆಲೆ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ ಸಂಜೆವಾಣಿಯೊಂದಿಗೆ ಮಾತನಾಡಿ, ಈ ಬಾರಿ ಟೊಮಾಟೋ ಹೆಚ್ಚು ಬೆಳೆದ ಕಾರಣ, ಬೆಂಬಲ ಬೆಲೆ ದೊರೆಯುತ್ತಿಲ್ಲ. ಆದ ಕಾರಣ, ರೈತರು ಸ್ವಸಹಾಯವಾಗಿ ಟೊಮಾಟೋ ಸಾಸ್‌ನ್ನು ಉತ್ಪಾದನೆ ಮಾಡಿ ಎಂದು ತಿಳಿಸಿದ್ದೇನೆ. ಈ ಉತ್ಪಾದನೆಯನ್ನು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯ ಜಾಮ್ ಹಾಗೂ ಸಾಸ್ ಉಪಯೋಗಿಸುವುದರಿಂದ ರೈತರಿಗೆ ಬೆಲೆಯು ದೊರೆತಂತಾಗುತ್ತದೆ. ಆದಕಾರಣ, ಈ ಭಾಗದ ರೈತರಿಗೆ ಮೌಲ್ಯವರ್ಧನೆ, ಕಾರ್ಖಾನೆಗಳನ್ನು ಪ್ರಾರಂಭಿಸಿದರೆ ಅನುಕೂಲವಾಗುತ್ತದೆಂದು ಹೇಳಿದರು.

Leave a Comment