ಬೆಲೆ ಏರಿಕೆ ನಡುವೆ ಭರ್ಜರಿ ಖರೀದಿ

ಇಂದು ಗೌರಿ, ನಾಳೆ ಗಣೇಶ ಹಬ್ಬ
ಮೈಸೂರು, ಸೆ. 12. ಹಿಂದೂಗಳ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ದೇವರಾಜ ಅರಸು ಮಾರುಕಟ್ಟೆಯಲ್ಲಿ ಬುಧವಾರ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಏರಿಕೆ ಸನ್ನಿವೇಶದ ನಡುವೆಯೂ ಗೌರಿ-ಗಣೇಶ ಹಬ್ಬದ ಖರೀದಿಯ ಭರಾಟೆ ಜೋರಾಗಿದೆ. ಹಬ್ಬಕ್ಕೆ ಯಥೇಚ್ಛವಾಗಿ ಬಳಸುವ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಆದರೆ ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಸಂಭ್ರಮದಿಂದಲೇ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ನಗರದಾದ್ಯಂತ ಕಂಡುಬಂದವು.
ಇಂದು ಗೌರಿ ಪೂಜೆ ಹಾಗೂ ಗುರುವಾರ ನಡೆಯಲಿರುವ ಗಣೇಶನ ಪೂಜೆಗಾಗಿ ಗೌರಿ, ಗಣೇಶ ಮೂರ್ತಿಗಳ ಖರೀದಿಯಲ್ಲೇ ಜನತೆ ತಲ್ಲೀನರಾಗಿದ್ದರು. ನಗರದ ವಿವಿಧ ಭಾಗಗಳಲ್ಲಿ ಮಕ್ಕಳು, ಯುವಕರು, ಮಹಿಳೆಯರು ಗಣೇಶ ಮೂರ್ತಿಗಳ ಖರೀದಿಸಿ ಮನೆಗೆ ತೆಗೆದುಕೊಂಡು ಹೋದರು. ಮಕ್ಕಳು ದೊಡ್ಡ, ದೊಡ್ಡ ಗಣೇಶನ ಮೂರ್ತಿಗಳತ್ತ ಕಣ್ಣಾಯಿಸಿದರೆ, ಮಹಿಳೆಯರು ಮನೆಗಳಲ್ಲಿ ಕೂರಿಸುವ ಸಲುವಾಗಿ ಸಣ್ಣಗಾತ್ರದ ಗೌರಿ, ಗಣೇಶ ಮೂರ್ತಿಗಳ ಖರೀದಿಸಿದರು.
ಹೂವು ಸ್ವಲ್ಪ ಬೆಲೆ ಏರಿಕೆ
ತರಕಾರಿಗಳು ಹಾಗೂ ಹಣ್ಣುಗಳ ಬೆಲೆ ಏರಿಕೆಯಾಗಿಲ್ಲ. ಆದರೆ, ಹೂವುಗಳ ಬೆಲೆಯಲ್ಲಿ ಮಾತ್ರ ಸ್ವಲ್ಪ ಏರಿಕೆ ಕಂಡು ಬಂದಿದೆ. ಗಣೇಶ ಹಬ್ಬದಂದು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಮಾರಾಟಗಾರರೊಬ್ಬರು ತಿಳಿಸಿದ್ದಾರೆ. ಮಲ್ಲಿಗೆ ಹಾಗೂ ಕಾಕಡ ಕೆ.ಜಿಗೆ (650 ರೂ.) ಒಂದು ಮಾರಿಗೆ (80 ರೂ.), ವಿವಿಧ ಬಣ್ಣದ ಹಾಗೂ ಆಕಾರದ ಗುಲಾಬಿಗಳಿಗೆ ಕಾಲು ಕೆ.ಜಿ.(70 ರೂ.) ಇದೆ. ಹಳದಿ ಸೇವಂತಿಗೆ 60 ರೂ. ಬಿಳಿ ಸೇವಂತಿಗೆ 80 ರೂ. ಗುಲಾಬಿ ಹಾಗೂ ಮಲ್ಲಿಗೆಯ ಹೂವಿನ ವಿವಿಧ ಗಾತ್ರದ ಹಾರಗಳಿಗೆ ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿತ್ತು. ಮಲ್ಲಿಗೆ ಹಾರ 150 ರೂ., ಆದರೆ, ಗುಲಾಬಿ ಹೂವಿನ ಹಾರಕ್ಕೆ 250 ರೂ.ಗಳಿಗೆ ಮಾರಾಟವಾಗುತ್ತಿತ್ತು. ಉಳಿದಂತೆ ತೆಂಗಿನಕಾಯಿ 25 ರೂ.ನಿಂದ 30 ರೂ. ಈರುಳ್ಳಿಗೆ ಕೆಜಿ 20 ರೂ. ಬೆಳ್ಳುಳ್ಳಿ 20 ರೂ. ನಿಂಬೆಹಣ್ಣು 10ಕ್ಕೆ 20 ರೂ. ಸೌತೆಕಾಯಿ 3ಕ್ಕೆ ಹತ್ತು ರೂ. ಟೊಮೆಟೊ ಕೆಜಿಗೆ 10 ರೂ. ಉಳಿದಂತೆ ಇತರೆ ತರಕಾರಿಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿರಲಿಲ್ಲ.
ಮಣ್ಣಿನ ಮೂರ್ತಿಗೆ ಬೇಡಿಕೆ
ನಗರದ ಇರ್ವಿನ್ ರಸ್ತೆ, ಅಗ್ರಹಾರ, ಪಡುವಾರಹಳ್ಳಿ, ಗೋಕುಲಂ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಜನರು ವಿವಿಧ ಗಾತ್ರದ ಹಾಗೂ ಮಣ್ಣಿನ ಗಣಪತಿಯನ್ನು ಖರೀದಿಸಿದರು. ಗೌರಿ ಮೂರ್ತಿಗಳಿಗೆ 100 ರೂ. ಆದರೆ ಉಳಿದಂತೆ ಗಣೇಶ ಹಾಗೂ ಗೌರಿ ಮೂರ್ತಿಗಳ ಗಾತ್ರಕ್ಕೆ ಹಾಗೂ ವಿವಿಧ ರೀತಿಯ ವಿಶೇಷತೆಗಳಿಗೆ ಅನುಸಾರವಾಗಿ ಅವುಗಳ ಬೆಲೆಯು 200, 300, 500, 1000 ರೂ. ಕಂಡು ಬಂತು.

Leave a Comment