ಬೆತ್ತ, ಜೋಳಿಗೆಯೊಂದಿಗೆ ಪ್ರತಿಭಟನೆ ನಡೆಸಿದ ಬೇಡ ಜಂಗಮರು

ದಾವಣಗೆರೆ, ಆ. 10 – ಸುಳ್ಳು ಭರವಸೆ, ಸುಳ್ಳು ಮಾಹಿತಿ ನೀಡಿದ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ ಪ ಜಾತಿ ಉಪರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಮಾಜ ಬಾಂಧವರು ಇಂದು ಜಯದೇವವೃತ್ತದಲ್ಲಿ ಬೆತ್ತ ಜೋಳಿಗೆಯೊಂದಿಗೆ ಭಿಕ್ಷಾಟನೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು. ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕರ್ನಾಟಕ ಮುಖ್ಯ ಗೆಜೆಟಿಯರ್ ಡಾ.ಯು.ಸೂರ್ಯನಾಥ ಕಾಮತ್ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಮೂಲಿ ಜಂಗಮರೆ ಬೇಡ ಜಂಗಮರು. ಜಂಗಮ ಎಂಬ ಶಬ್ದವು ಲಿಂಗವಂತಕ್ಕೆ ಸೇರಿದ್ದು, ಬೇಡಜಂಗಮರನ್ನು ಊರುಗಳಲ್ಲಿ ಅಯ್ಯಗಳು, ಗುರು, ಸ್ವಾಮಿ ಜಂಗಮರು ಎಂದು ಕರೆಯುತ್ತಿದ್ದು ಇವರುಗಳು ಪಂಚಪೀಠಕ್ಕೆ ಸೇರಿದವರು. ಚಿಕ್ಕವಯಸ್ಸಿನಲ್ಲಿ ದೀಕ್ಷೆ ಪಡೆದು ಗುರುಗಳು ನೀಡಿದ ಬೆತ್ತ ಜೋಳಿಗೆ ಹಿಡಿದು ಐದು ಮನೆಯವರಿಂದ ಭಿಕ್ಷೆ ಪಡೆಯುತ್ತಾರೆ. ಆ ಭಿಕ್ಷೆಯನ್ನು ಗುರುಗಳಿಗೆ ನೀಡಿ ಅಲ್ಲಿಂದ ಅವರ ಜೀವನೋಪಾಯಕ್ಕೆ ಪಡೆಯುತ್ತಾರೆ ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವರದಿ ಸಲ್ಲಿಸಲಾಗಿದೆ. ನಮ್ಮ ಸಮಾಜ ಅತ್ಯಂತ ಹಿಂದುಳಿದಿದೆ. ಆ ವರದಿಯಂತೆ ಸಮಾಜಕ್ಕೆ ಜಾತಿಗುರುತಿನ ಪ್ರಮಾಣ ಪತ್ರವನ್ನು ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ವರದಿಯಲ್ಲಿ ಉಲ್ಲೇಖಿತವಾಗಿದೆ. ಆದರೆ ನಮಗೆ ನಮ್ಮ ಹಕ್ಕಿನಿಂದ ವಂಚಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ವರದಿಯಂತೆ ಪತ್ರ ಬರೆದು ಆದೇಶಿಸಲಾಗಿದೆ. ಹೀಗಿದ್ದು ಸಹ ಯಾವುದೇ ಸೌಲಭ್ಯ ನೀಡುತ್ತಿಲ್ಲ, ಆದ್ದರಿಂದ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಬೇಡ ಜಂಗಮ ಜಾತಿಯ ಬಗ್ಗೆ ಸುಳ್ಳು ಭರವಸೆ, ಸುಳ್ಳು ಮಾಹಿತಿ, ಅರೆಬರೆ ಮಾಹಿತಿ, ದ್ವೇಷಪೂರಕ ಮಾಹಿತಿ ನೀಡಿದ್ದೆ ಆದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ದೌರ್ಜನ್ಯ ಪ್ರತಿಬಂಧಕ ಕಾಯ್ದೆ 1995 ಅಧಿನಿಯಮದಡಿಯಲ್ಲಿ ಸರ್ಕಾರದ ಕಂದಾಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ವೇಳೆ ರಾಜ್ಯಾಧ್ಯಕ್ಷ ಎಂ.ಪಿ.ದ್ವಾರಕೇಶ್ವರಯ್ಯ ನೇತೃತ್ವದಲ್ಲಿ ಸಮಾಜ ಬಾಂಧವರು ಪ್ರತಿಭಟನೆಯಲ್ಲಿದ್ದರು.

Leave a Comment