ಬೆಟ್ಟದ ತಾಯಿಗೆ ಬಾಗಿದ ನಾಯಕರು

ಮೈಸೂರು, ನ. ೮- ಬೆಟ್ಟದತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಇಂದು ರಾಜಕೀಯ ನಾಯಕರು ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಮೈಸೂರಿನ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈಡುಗಾಯಿ ಒಡೆದು, ಪ್ರದಕ್ಷಿಣೆ ಹಾಕಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಪೂಜೆ ಸಲ್ಲಿಸಿದ್ದು, ಸಂಕಷ್ಟ ದೂರವಾಗಲಿ ಎಂದು ನಾಡ ಅಧಿದೇವತೆಯಲ್ಲಿ ಬೇಡಿಕೊಂಡರು.

ಇದಕ್ಕೂ ಮುನ್ನ ಮೈಸೂರಿನಲ್ಲಿರುವ ಡಿಕೆಶಿ ಮಾವನ ಮನೆಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಮಾಜಿ ಸಂಸದರು ಆಗಮಿಸಿ ಡಿಕೆಶಿಯನ್ನು ಭೇಟಿ ಮಾಡಿದರು. ಪೂಜೆಯ ವೇಳೆ ಸೋನಿಯಾ ಗಾಂಧಿ ಆರೋಗ್ಯ ಚೇತರಿಕೆ ಆಗಲೆಂದು ಪುರೋಹಿತರ ಬಳಿ ಹೇಳಿಸಿ, ವಿಶೇಷ ಪೂಜೆ ಮಾಡಿಸಿದ್ದಾರೆ.

ಇಂದೇ ಚಾಮುಂಡಿಬೆಟ್ಟಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭೇಟಿ ನೀಡಿದ್ದು, ಈ ವೇಳೆ ಡಿಕೆಶಿ ದೇವೇಗೌಡರನ್ನು ಭೇಟಿ ಮಾಡಿ, ಕ್ಷೇಮ ಸಮಾಚಾರ ವಿಚಾರಿಸಿದರು. ನಂಜನಗೂಡಿನಿಂದ ಚಾಮುಂಡಿಬೆಟ್ಟಕ್ಕೆ ಬಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಹ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಮಾಡಿಸಿದರು. ದೇವೇಗೌಡರು ಬಂದಾಗ ದೇಗುಲದ ಎದುರು 101 ಈಡುಗಾಯಿ ಒಡೆಯುತ್ತಿದ್ದ ಡಿ.ಕೆ.ಶಿವಕುಮಾರ್, ತಕ್ಷಣ ಅವರತ್ತ ಧಾವಿಸಿ ಕಾಲಿಗೆ ನಮಸ್ಕರಿಸಿ ಕುಶಲ ವಿಚಾರಿಸಿದರು. ಈ ಸಂದರ್ಭ ಜಿ.ಟಿ.ದೇವೇಗೌಡರು ಸುತ್ತಮುತ್ತ ಕಾಣಿಸಲಿಲ್ಲ.

‘ನಾಡದೇವತೆ ಚಾಮುಂಡೇಶ್ವರಿ ದುಃಖ ದೂರ ಮಾಡುವ ದೇವಿ. ದುರ್ಗೆಯ ಸ್ವರೂಪ ಪಕ್ಷ ಭೇದ ಮರೆತು ರಾಜ್ಯಕ್ಕೆ ಎಲ್ಲ ಜನರಿಗೂ ಒಳ್ಳೇದಾಗಲಿ ಅಂತ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಿನ್ನೆ ಗುರುವಾರ ನಂಜುಂಡೇಶ್ವರ, ದತ್ತಾತ್ರೇಯನ ದರ್ಶನ ಮಾಡಿದೆ. ಇಂದು ಚಾಮುಂಡೇಶ್ವರಿ ದರ್ಶನ ಭಾಗ್ಯ ಸಿಕ್ಕಿದೆ. ಕಷ್ಟ ನಿವಾರಣೆ ಆಗಲಿ ಅಂತ ಪ್ರಾರ್ಥನೆ ಮಾಡಿಕೊಂಡೆ’ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

‘ವಿಧಾನಸೌಧದಲ್ಲಿಯೂ ತಕ್ಕಡಿ ಇದೆ. ಅದು ಮೇಲೆ ಕೆಳಗೆ ತೂಗ್ತಾ ಇರುತ್ತೆ. ಅದು ನ್ಯಾಯದ ತಕ್ಕಡಿ’ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು. ತೊಂದರೆ ಏನಿದೆ ? ಏನು ಇಲ್ಲ ? ನಮ್ಮ ಪಕ್ಷದ ಅಧ್ಯಕ್ಷರಿದ್ದಾರೆ, ಶಾಸಕಾಂಗ ಪಕ್ಷದ ನಾಯಕಿದ್ದಾರೆ. ನಾವೆಲ್ಲರೂ ಸೇರಿ ಕೆಲಸ ಮಾಡ್ತಿದ್ದೀವಿ. ಯಾವ ಗುಂಪೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Leave a Comment