ಬೆಂಗಳೂರು ಮೂಲಸೌಕರ್ಯಕ್ಕೆ ಆದ್ಯತೆ

ಬೆಂಗಳೂರು. ಏ.15.ಉದ್ಯಾನನಗರಿಯ ಹಿಂದಿನ ಹಸಿರು ವೈಭವವನ್ನು ಮರಳಿ ತರುವುದು ತಮ್ಮ ಆದ್ಯತೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಇಂದು ಪದ್ಮನಾಭ ನಗರ, ಬೊಮ್ಮನಹಳ್ಳಿ ಹಾಗೂ ಗೋವಿಂದರಾಜ ನಗರಗಳಲ್ಲಿ ಹರಿಪ್ರಸಾದ್ ಭರ್ಜರಿ ಪ್ರಚಾರ ನಡೆಸಿದರು. ಪದ್ಮನಾಭನಗರ ಮತ್ತು ಗೋವಿಂದರಾಜನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದರು. ಬೊಮ್ಮನಹಳ್ಳಿಯಲ್ಲಿ ಕರ್ನಾಟಕ ಬಹುಜನ ಸಂಘರ್ಷ ಸಮಿತಿಯ ಮುಖಂಡರೊಂದಿಗೆ ಸಭೆಯಲ್ಲಿ ಭಾಗವಹಿಸಿದರು.

ರೋಡ್ ಶೋ ನಂತರ ಮಾತನಾಡಿದ ಅವರು, ಮೂಲಸೌಕರ್ಯ ಅಭಿವೃದ್ಧಿ ಜೊತೆಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಲವು ಕನಸು ಹೊತ್ತಿರುವುದಾಗಿ ಹೇಳಿದರು. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಲಾಲ್ ಬಾಗ್ ನಂತಹ ಪಾರ್ಕ್ ನಿರ್ಮಿಸಲು ಸ್ಥಳಾವಕಾಶವಿದೆ. ಹೆಚ್ಚು ಹೆಚ್ಚು ಉದ್ಯಾನವನಗಳನ್ನು ರೂಪಿಸುವ ಮೂಲಕ ಗಾರ್ಡ್ನ್ ಸಿಟಿ ಎಂಬ ಹೆಸರನ್ನು ಮರಳಿ ತರುವುದು ತಮ್ಮ ಗುರಿಯಾಗಿರಲಿದೆ ಎಂದರು.

ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಯೋಜನೆ ಸೂಕ್ತ ಎಂದ ಅವರು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಹರಿಪ್ರಸಾದ್ ಪರವಾಗಿ ಮತ ಯಾಚಿಸಲು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಬೈಕ್ ಜಾಥಾ ನಡೆಸಿದರು.

Leave a Comment