ಬೆಂಗಳೂರು-ಮಂಗಳೂರು ಹಗಲು ರೈಲು ಪ್ರಾರಂಭ

ಮಂಗಳೂರು, ಅ.೧೧- ಬೆಂಗಳೂರು-ಮಂಗಳೂರು ನಡುವೆ ಕೊನೆಗೂ ರೈಲು ಸಂಚಾರ ಆರಂಭಗೊಂಡಿದೆ. ನಿನ್ನೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ರೈಲು ಸಂಚಾರ ಆರಂಭಿಸಿದೆ. ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯಲ್ಲಿ ಭೂಕುಸಿತ ಉಂಟಾಗಿತ್ತು. ಇದರಿಂದ ರೈಲು ಸಂಚಾರ ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿತ್ತು. ಆದರೆ ರೈಲ್ವೆ ಇಲಾಖೆ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಸಿದ ಕಾರಣ ಒಂದೂವರೆ ತಿಂಗಳ ಬಳಿಕ ಮತ್ತೆ ರೈಲು ಸಂಚಾರ ಅರಂಭವಾಗಿದೆ.
ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಪುನಾರಂಭಗೊಂಡಿದ್ದು, ಕಾರವಾರ-ಕಣ್ಣೂರು-ಕೆಎಸ್‌ಆರ್ ಬೆಂಗಳೂರು ರೈಲು ಇಂದು ಸಂಚಾರ ಆರಂಭಿಸಲಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಇಂದು ಮುಂಜಾನೆ ೭.೧೦ಕ್ಕೆ ಯಶವಂತಪುರದಿಂದ ಹೊರಡಲಿದೆ. ಅದಕ್ಕೆ ಪರ್ಯಾಯವಾಗಿ ನಾಳೆಯಿಂದ ಕಾರವಾರದಿಂದ ರೈಲು ಬೆಂಗಳೂರಿಗೆ ಸಂಚರಿಸಲಿದೆ. ಭೂಕುಸಿತವಾದ ಕಡೆಗಳಲ್ಲಿ ರೈಲ್ವೇ ಹಳಿಗಳ ದುರಸ್ತಿ ಕಾರ್ಯ ನಡೆಸಿ, ಈ ಮಾರ್ಗದಲ್ಲಿ ಗೂಡ್ಸ್ ರೈಲು ಓಡಿಸಿ ಪರಿಕ್ಷೆ ನಡೆಸಿತ್ತು. ರೈಲು ಸಂಚಾರಕ್ಕೆ ಈ ಮಾರ್ಗ ಸುರಕ್ಷಿತವಾಗಿರುವ ವರದಿ ಹಿನ್ನೆಲೆಯಲ್ಲಿ ಈಗ ಮಂಗಳೂರು- ಬೆಂಗಳೂರು ನಡುವೆ ಪ್ರಯಾಣಿಕರ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Leave a Comment