ಬೆಂಗಳೂರು ಬೆಡಗಿ ಶ್ವೇತಾ “ಸ್ಪೆಶಲ್ ಕ್ವೀನ್ ಅಂಬಾಸಿಡಾರ್”

ಈಗಂತೂ ಸ್ಪರ್ಧಾಯುಗ. ಯಾವುದೇ ಸ್ಪರ್ಧೆಯಿರಲಿ ಪೈಪೋಟಿಯಂತೂ ಇದ್ದೇ ಇರುತ್ತದೆ. ಇಂತಹ ಸೆಣಸಾಟದಲ್ಲಿ ಗೆಲುವು ಸಾಧಿಸುವುದು ಸುಲಭ ಮಾತಲ್ಲ. ಸಿಲಿಕಾನ್ ಸಿಟಿಯ ಬೆಡಗಿ ಸಿಂಗಪುರದಲ್ಲಿ ನಡೆದ ” ಮಿಸೆಸ್ ವರ್ಲ್ಡ್ ವೈಡ್ ” ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ಚಾಪು ಮೂಡಿಸಿ ರಾಜ್ಯದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಮಿಂಚಿದ ಶ್ವೇತಾ ನಿರಂಜನ್ ’ಸ್ಪೆಷಲ್ ಕ್ವೀನ್ ಅಂಬಾಸಿಡರ್” ಕಿರೀಟವನ್ನು ಮುಡಿಗೇರಿಸಿದ್ದಾರೆ.

s1
ಅಕ್ಟೋಬರ್ ೨೦ರಂದು ನಡೆದ ಈ ಸ್ಪರ್ಧೆಯಲ್ಲಿ ಸುಮಾರು ೨೮ ದೇಶಗಳ ರೂಪದರ್ಶಿಯರು ಭಾಗವಹಿಸಿದ್ದರಿಂದ ಸಹಜವಾಗಿಯೇ ಭಾರೀ ಪೈಪೋಟಿ ಕಂಡು ಬಂದಿತ್ತು. ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶ್ವೇತಾ ‘ಮಿಸೆಸ್ ವರ್ಲ್ಡ್ ವೈಡ್-೨೦೧೯ ಸ್ಪೆಶಲ್ ಕ್ವೀನ್ ಅಂಬಾಸಿಡಾರ್’ ಪ್ರಶಸ್ತಿಗೆ ಭಾಜನರಾಗುವ ಮೂಲಕ ವಿನೂತನ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ರಾಜಸ್ತಾನ ರಾಜಧಾನಿ ಜೈಪುರದಲ್ಲಿ ಇತ್ತೀಚೆಗೆ ನಡೆದ ‘ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್’ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಶ್ವೇತಾ ಅಂತಿಮ ಸುತ್ತಿಗೆ ಲಗ್ಗೆ ಹಾಕಿದ್ದರು. ಸಿಂಗಾಪುರದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ, ಕಣ್ಣುಕೊರೈಸುವ ವೇದಿಕೆಯ ಮೇಲೆ ಆತ್ಮವಿಶ್ವಾಸದ ಪ್ರದರ್ಶನ ನೀಡಿದ ಸಂತಸದ ಅಲೆಯಲ್ಲಿ ತೇಲಾಡುತ್ತಿದ್ದಾರೆ. ‘ಮಿಸೆಸ್ ವರ್ಲ್ಡ್ ವೈಡ್-೨೦೧೯ ಸ್ಪೆಶಲ್ ಕ್ವೀನ್ ಅಂಬಾಸಿಡಾರ್’ ಬಹಳ ದೊಡ್ಡ ಗೌರವ. ಇಂತಹ ಪ್ರಶಸ್ತಿ ಲಭಿಸಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು ಶ್ವೇತಾ.

s2
ಸಿಂಗಾಪುರದಲ್ಲಿ ಗೆಲುವು ಸಾಧಿಸಿರುವ ಶ್ವೇತ ಹಲವಾರು ಪ್ರತಿಷ್ಠಿತ ಕಂಪನಿಗಳ ಜಾಹೀರಾತುಗಳಿಗೆ ರೂಪದರ್ಶಿಯಾಗುವ ಅವಕಾಶ ಗಿಟ್ಟಿಸಿದ್ದಾರೆ. ಅಷ್ಟೇ ಅಲ್ಲ ಪ್ರಮುಖ ಫ್ಯಾಷನ್ ನಿಯತಕಾಲಿಕೆಗಳಿಗೂ ರೂಪದರ್ಶಿಯಾಗಿ ವಿಜೃಂಭಿಸಲು ಅಣಿಯಾಗಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಈಗ ಅವರು ಜಗತ್ತಿನಾದ್ಯಂತ ೪೫೦೦ ಕೇಂದ್ರಗಳನ್ನು (ಸ್ವಯಂ ಸೇವಾ ಸಂಘಗಳು) ಹೊಂದಿರುವ ಬೃಹತ್ ಸಂಸ್ಥೆಯಾದ ರೀಚ್೪ಕಾಸ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿರುವುದು ವಿಶೇಷ.
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಗ್ಲೋಬಲ್ ಪ್ರೆಕ್ಯೂರ್‌ಮೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಶ್ವೇತ. ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಸ್ಕೇಟಿಂಗ್, ಈಜು, ಕುದುರೆ ಸವಾರಿ, ಗಾಲ್ಫ್, ಮಾಡೆಲಿಂಗ್, ಫಿಟ್ನೆಸ್, ಯೋಗ, ನೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. . ರೂಪದರ್ಶಿಯೂ ಆಗಿರುವ ಶ್ವೇತಾ, ಚಿಕ್ಕಂದಿನಿಂದಲೂ ಹಲವಾರು ಕಲಾ ಪ್ರಕಾರಗಳಲ್ಲಿ ಮಿಂಚಿರುವ ಶ್ವೇತಾ, ಶಾಸ್ತ್ರೀಯ ನೃತ್ಯ ಹಾಗೂ ಸಾಲ್ಸಾ ನೃತ್ಯ ಪ್ರಕಾರಗಳನ್ನು ಬಲ್ಲ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿರುವುದು ವಿಶೇಷ.
ಫೆಬ್ರವರಿ ೨೦೧೮ರಲ್ಲಿ ಬೆಂಗಳೂರಿನಲ್ಲಿ ನಡೆದ ಮಿಸೆಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಶ್ವೇತಾ ಮೊದಲ ಗೆಲುವಿನ ನಗೆ ಬೀರಿದ್ದರು.ಅಲ್ಲಿಂದ ಆರಂಭವಾದ ಈ ಅಭಿಯಾನ ಸೌಂದರ್ಯ ಸ್ಪರ್ಧೆಯ ಪ್ರಯಾಣ ನಂತರ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವುದರೊಂದಿಗೆ ಮಹತ್ವದ ಘಟ್ಟ ತಲುಪಿತು. ಡಿಸೆಂಬರ್ ೨೦೧೮ರಲ್ಲಿ ಜೈಪುರದಲ್ಲಿ ನಡೆದ ‘ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್’ ಸ್ಪರ್ಧೆಯಲ್ಲಿ “ಮಿಸೆಸ್ ಇಂಡಿಯಾ ಐಎಂಪಿ” ಕಿರೀಟ ಗೆದ್ದು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಕೀರ್ತಿ ಶ್ವೇತಾ ಅವರಿಗೆ ಸಲ್ಲುತ್ತದೆ.
ಈ ಸಾಧನೆ ನನ್ನೊಬ್ಬಳದಲ್ಲ ಇದರ ಹಿಂದೆ ಪ್ರೇರಕ ಶಕ್ತಿಯಾಗಿ ನಿಂತವರು ನನ್ನ ತಂದೆ, ತಾಯಿ, ಸೋದರಿ ಹಾಗೂ ಎಂಟು ವರ್ಷದ ನನ್ನ ಮಗ ಕೃತಿನ್. ನನ್ನ ಸೌಂದರ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ ಈ ಸ್ಪರ್ಧೆಗೆ ಭಾಗವಹಿಸುವಂತೆ ನನ್ನನ್ನು ಪ್ರೇರೇಪಿಸಿದ ಸ್ಪರ್ಧಾ ಕಾರ್ಯಕ್ರಮದ ರಾಷ್ಟ್ರೀಯ ನಿರ್ದೇಶಕಿ ಜಸ್ಪ್ರೀತ್ ಮತ್ತು ನಂದಿನಿ ನಾಗರಾಜ್ ಅವರ ಸ್ನೇಹಪೂರ್ವಕ ಒತ್ತಾಸೆಯನ್ನು ನೆನಪಿಸಿಕೊಳ್ಳುತ್ತಾರೆ ಶ್ವೇತಾ.
ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಈ ಬೆಡಗಿ, ವಿಭಿನ್ನ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ನೃತ್ಯವನ್ನು ಹೇಳಿಕೊಡುವ ಕಾಯಕದಲ್ಲಿ ನಿರತರಾಗಿರುವುದು ವಿಶೇಷ. ತಮ್ಮ ವೈಯಕ್ತಿಕ ಬದುಕಿನಲ್ಲಿ ಹಲವಾರು ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತಿದ್ದಾರೆ. ತಮ್ಮ ಅಸ್ತಿತ್ವದ ಮೇಲಿನ ನಂಬಿಕೆ ಕಳೆದುಕೊಂಡಿರುವ ಮಹಿಳೆಯರನ್ನು ಪ್ರೇರೇಪಿಸುವುದು ಮತ್ತು ತಮ್ಮದೇ ಆದ ವ್ಯಾಖ್ಯಾನದಲ್ಲಿ ಶ್ರೇಷ್ಠತೆಯನ್ನು ಪಡೆದುಕೊಳ್ಳಲು ಮತ್ತು ಸ್ವತಂತ್ರವಾಗಿರಲು ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

Leave a Comment