ಬೆಂಗಳೂರು ನಾಗರತ್ನಮ್ಮನ ನಾಟಕ ಪ್ರಯೋಗ- ಪಿ.ರಮಾ ಕೊಡುಗೆ

‘ಪುಸ್ತಕಂ’ ರಮಾ ಕರ್ನಾಟಕ ಸಂಗೀತಲೋಕದಲ್ಲಿ ಪ್ರಖ್ಯಾತ ಹೆಸರು. ದಿನ ಬೆಳಗಾದರೆ ಆಕಾಶವಾಣಿಯಲ್ಲಿ ಆಲಿಸುತ್ತಿದ್ದ ವಿಶಿಷ್ಟ ಕಂಠ. ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಹಲವಾರು ಕಡೆ ನಿರಂತರ ನಡೆಸುವ ಅಸಂಖ್ಯಾತ ಸಂಗೀತ ಕಚೇರಿಗಳನ್ನಲ್ಲದೆ, ಭರತನಾಟ್ಯ ನೃತ್ಯ ಪ್ರದರ್ಶನಗಳಲ್ಲಿ ನರ್ತಕಿಯರ ಆಂಗಿಕಾಭಿನಯ-ಅಭಿನಯಗಳಿಗೆ ಸಂಗೀತದ ಮೂಲಕ ಜೀವ ತುಂಬುವ ಭಾವಪೂರ್ಣ ದನಿಯ ಒಡತಿ. ಕರ್ನಾಟಕ ಶಾಸ್ತ್ರೀಯ ಸಂಗೀತ, ಭಕ್ತಿ ಗೀತೆಗಳು, ಸುಗಮ ಸಂಗೀತ ಯಾವುದಕ್ಕಾದರೂ ಸಮರಸವಾಗಿ ಬೆರೆವ ಧ್ವನಿ ಇವರದು. ಈ ಮೂರು ವಿಭಾಗಗಳಲ್ಲೂ ಆಕಾಶವಾಣಿಯ ‘ಎ-ಟಾಪ್ ’ ಗ್ರೇಡ್ ಪಡೆದ ಪ್ರತಿಭೆ. ಸದಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಚೇತನ.
ಮೂಲತಃ ಮೈಸೂರಿನವರಾದ ಪಿ. ಗೋಪಾಲಕೃಷ್ಣನ್ ಮತ್ತು ಇಂದಿರಾ ಅವರ ಪುತ್ರಿಯಾದ ರಮಾಗೆ ಸಂಗೀತ ಹುಟ್ಟಿನಿಂದ ದತ್ತ ಪ್ರತಿಭೆ. ಸಂಗೀತದ ಮನೆತನ, ಸಾಂಸ್ಕೃತಿಕ ವಾತಾವರಣ. ಬಾಲಕಿಯಲ್ಲಿದ್ದ ಸಂಗೀತದ ಒಲವನ್ನು ಗುರುತಿಸಿ ಸಂಗೀತ ಕಲಿಕೆಗೆ ಸೆಳೆದವರು ಚಿಕ್ಕಮ್ಮ ಪ್ರಖ್ಯಾತ ವೈಣಿಕ ವಿದುಷಿ ಎಂ.ಕೆ.ಸರಸ್ವತಿ. ನಂತರ, ವಿದ್ವಾನ್ ಟಿ.ಆರ್. ಶ್ರೀನಿವಾಸನ್ ಅವರಲ್ಲಿ ಸಂಗೀತಾಭ್ಯಾಸ. ಶಾಲಾ-ಕಾಲೇಜುಗಳ ಎಲ್ಲ ಸಂಗೀತ ಸ್ಪರ್ಧೆಗಳಲ್ಲೂ ರಮಾಗೆ ಬಹುಮಾನ ಕಟ್ಟಿಟ್ಟಬುತ್ತಿ. ಸಂಗೀತವನ್ನೇ ವ್ಯಾಸಂಗದ ಮುಖ್ಯ ವಿಷಯವನ್ನಾಗಿ ಆಯ್ದುಕೊಂಡ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ‘ಡಿಸ್ಟಿಂಕ್ಷನ್’ ನೊಂದಿಗೆ ಸ್ನಾತಕೋತ್ತರ ಎಂ.ಎ. ಪದವಿ ಪಡೆದುಕೊಂಡರು. ಹೆಚ್ಚಿನ ಕಲಿಕೆಯನ್ನು ಖ್ಯಾತ ಸಂಗೀತ ವಿದುಷಿ ನಾಗಮಣಿ ಶ್ರೀನಾಥ್ ಮತ್ತು ಶ್ರೀ ಆರ್.ಕೆ.ಶ್ರೀಕಂಠನ್ ಬಳಿ ಮುಂದುವರಿಸಿದರು. ಅಪಾರ ಪರಿಶ್ರಮ, ಅನುಭವ, ಪಾಂಡಿತ್ಯಗಳಿಂದ ಸಾಧಕಿಯಾಗಿ ಗಮನಾರ್ಹ ಸ್ಥಾನ ಗಳಿಸಿರುವ ರಮಾ ಅಭಿನಯದಲ್ಲೂ ಆಸಕ್ತಿ ಉಳ್ಳವರು. ಹೀಗಾಗಿ ಅವರ ಚಟುವಟಿಕೆಯ ಸಾಂಸ್ಕೃತಿಕ ಆಯಾಮಗಳು ವಿಸ್ತಾರಗೊಳ್ಳುತ್ತ ಬಂದಿವೆ.
ಇಂದು ನೃತ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿಖ್ಯಾತ ಸಂಸ್ಥೆ ‘ಸಂಗೀತ ಸಂಭ್ರಮ’ ಸಂಸ್ಥೆಯ ನೇತೃತ್ವ ವಹಿಸಿರುವ ಇವರಿಗೆ, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯು ಪ್ರತಿಷ್ಠಿತ ‘’ಕಲಾಶ್ರೀ” ಪ್ರಶಸ್ತಿಯನ್ನು ಕೊಡಮಾಡಿದೆ. ಮೂರುದಶಕಗಳನ್ನು ದಾಟಿದ ‘ಸಂಗೀತ ಸಂಭ್ರಮ’ ಸಂಗೀತ ಸಂಸ್ಥೆ ಪ್ರತಿವರ್ಷ ನಡೆಸುತ್ತಿರುವ “ನಿರಂತರಂ” ರಾಷ್ಟ್ರೀಯ ಸಂಗೀತ ಮತ್ತು ನೃತ್ಯಗಳ ಉತ್ಸವ, ಕಳೆದ ಹನ್ನೆರಡು ವರ್ಷಗಳಿಂದ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಖ್ಯಾತ ಮತ್ತು ಉದಯೋನ್ಮುಖ ಕಲಾವಿದರಿಗೂ ವೇದಿಕೆ ಒದಗಿಸುತ್ತಿದೆ.
ಇದೀಗ ರಮಾ ತಮ್ಮ ಹೊಸ ಪರಿಕಲ್ಪನೆಯ ಯೋಜನೆಯ ಪ್ರಯೋಗಕ್ಕೆ ಅಣಿಯಾಗಿದ್ದಾರೆ. ಕರ್ನಾಟಕದ ಮರೆಯಲಾರದ ಕಣ್ಮಣಿ, ಸಂಗೀತ ವಿದುಷಿ, ನೃತ್ಯ ಕಲಾವಿದೆ, ಭಜನೆ-ಹರಿಕಥೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ‘ಬೆಂಗಳೂರು ನಾಗರತ್ನಮ್ಮ’ನವರ ಸ್ಮರಣೀಯ ಸೇವೆಯನ್ನು ನಾಟಕರೂಪದಲ್ಲಿ ಪುನರ್ನೆನಪಿಸಲಿದ್ದಾರೆ. ಸ್ತ್ರೀವಾದಿ, ಹೋರಾಟಗಾರ್ತಿ ಸಾಧಕಿಯಾದ ನಾಗರತ್ನಮ್ಮನವರ ಜೀವನಚರಿತ್ರೆ ವಿಶಿಷ್ಟವಾಗಿದೆ.
ಭಾರತೀಯ ಸಂಗೀತದ ಇತಿಹಾಸದಲ್ಲಿ ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ನವರ ಹೆಸರು ಚಿರಸ್ಥಾಯಿ. ಈಕೆ ಸಂಗೀತ ಮತ್ತು ನೃತ್ಯಲೋಕಕ್ಕೆ ನೀಡಿದ ಕೊಡುಗೆ ಅಪಾರ. ದೇವದಾಸಿ ಮನೆತನದಲ್ಲಿ ಹುಟ್ಟಿದ ಆಕೆ, ಅಂದಿನ ಕಾಲಘಟ್ಟದಲ್ಲಿ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ ಸಾಧನೆಯ ಹಾದಿಯಲ್ಲಿ ನಡೆದುದು ಸಣ್ಣ ಸಾಹಸವಲ್ಲ. ಈ ಸವಾಲನ್ನು ಅದ್ಭುತವಾಗಿ ನಿರ್ವಹಿಸಿದ ದಿಟ್ಟಮನದ ಈ ಹೋರಾಟಗಾರ್ತಿಯ ಜೀವನಚರಿತ್ರೆ ದಾಖಲಾರ್ಹ. ಈ ದಿಸೆಯಲ್ಲಿ ಡಾ.ಪುಸ್ತಕಂ ರಮಾ, ನಾಗರತ್ನಮ್ಮನವರ ಸ್ಮರಣೀಯ ಕೊಡುಗೆಯನ್ನು ಚಿತ್ರಿಸುವ ವಿಶಿಷ್ಟ ನಾಟಕದ ನಿರ್ಮಾಣದ ಹೊಣೆ ಹೊತ್ತಿದ್ದು, ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣರ ನಿರ್ದೇಶನದಲ್ಲಿ ಹೊಸಪ್ರಯೋಗಕ್ಕೆ ಅಣಿಯಾಗಿದ್ದಾರೆ.
ನಂಜನಗೂಡಿನಲ್ಲಿ ಹುಟ್ಟಿ, ಮೈಸೂರಿನಲ್ಲಿ ಘನ ವಿದ್ವಾಂಸರ ಆಶ್ರಯದಲ್ಲಿ ಅನೇಕ ಭಾಷೆಗಳ ಅಭ್ಯಾಸ, ಸಂಗೀತ-ನೃತ್ಯ, ಹರಿಕಥೆಗಳಲ್ಲಿ ಪರಿಶ್ರಮ ಪಡೆದು ಸಂಸ್ಕಾರವಂತಳಾಗಿ, ಬೆಂಗಳೂರಿಗೆ ಬಂದು ತನ್ನ ಪ್ರತಿಭಾ-ಪಾಂಡಿತ್ಯ ಪ್ರಕಾಶಿಸಿ, ಅನಂತರ ಮದರಾಸಿಗೆ ತೆರಳಿ ಆಕೆ ಮಾಡಿದ ಸಾಧನೆಗಳು ಬೆರಗು ಹುಟ್ಟಿಸುವಂಥವು. ಇಂಥ ದಿವ್ಯಚೇತನದ ಜೀವನದ ಪುಟಗಳನ್ನು ಅನಾವರಣಗೊಳಿಸುವ ನಾಟಕದ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ. ಈ ನಾಟಕ ಪ್ರದರ್ಶನ ಪ್ರೇಕ್ಷಕರ ಪಾಲಿಗೆ ವಿನೂತನ ಕೊಡುಗೆ ಎಂದರೂ ಅತಿಶಯೋಕ್ತಿಯಲ್ಲ.
ನಾಟಕದ ಸಂಗೀತ ವಿನ್ಯಾಸವನ್ನು ರೂಪುಗೊಳಿಸಿರುವ ಜೊತೆಗೆ ರಮಾ, ‘ನಾಗರತ್ನಮ್ಮ’ನವರ ಪಾತ್ರವನ್ನು ಅಭಿನಯಿಸುತ್ತಿರುವುದು ವಿಶೇಷ. ಕಣ್ಮನ ತಣಿಸುವ ಈ ಸಂಗೀತಪೂರ್ಣ ನಾಟಕವನ್ನು ‘’ಸಂಗೀತ ಸಂಭ್ರಮ” ಮತ್ತು ‘’ಬೆನಕ” ತಂಡಗಳು ಪ್ರಸ್ತುತಿ ಪಡಿಸುತ್ತವೆ. ಪರಿಕಲ್ಪನೆ-ವಿನ್ಯಾಸ ಮತ್ತು ನಿರ್ದೇಶನ ಟಿ.ಎಸ್.ನಾಗಾಭರಣ. ನೃತ್ಯವಿನ್ಯಾಸ ಪುಲಿಕೇಶಿ ಕಸ್ತೂರಿ, ರಂಗರೂಪ ಹೂಲಿ ಶೇಖರ್ ಮತ್ತು ಪ್ರತಿಭಾ ನಂದಕುಮಾರ್. ಮೂಲಕಥೆ- ವಿ. ಶ್ರೀ ರಾಮ್ ಮತ್ತು ಮಲೆಯೂರು ಗುರುಸ್ವಾಮಿ.
ನಾಟಕ ಪ್ರದರ್ಶನದ ಸ್ಥಳ- ಚೌಡಯ್ಯ ಸ್ಮಾರಕ ಭವನ, ದಿ. ೨೭-೧೨-೨೦೧೯, ಶುಕ್ರವಾರ ಸಂಜೆ ೭ ಗಂಟೆಗೆ.
* ವೈ.ಕೆ.ಸಂಧ್ಯಾ ಶರ್ಮ

Leave a Comment