ಬೆಂಗಳೂರು ಒನ್ ಕೇಂದ್ರಗಳಲ್ಲಿ ಬಾಡಿಗೆ ಕರಾರು ಪತ್ರ

ಬೆಂಗಳೂರು,ಸೆ.೪-ಬಾಡಿಗೆ ಕರಾರು ಪತ್ರಗಳು ಮತ್ತು ಇತರೆ ದಾಖಲೆಗಳನ್ನು ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಿದ್ಧಪಡಿಸಬಹುದು.
ಕಾನೂನು ತಂತ್ರಜ್ಞಾನ ಕಂಪನಿ ಲೀಗಲ್‌ಡೆಸ್ಕ್.ಕಾಂ, ಬೆಂಗಳೂರು ಒನ್ ಸಹಯೋಗದಲ್ಲಿ ಹೊಸ ಆನ್‌ಲೈನ್ ಬಾಡಿಗೆ ಒಪ್ಪಂದ ಸೇವೆಯನ್ನು ಪ್ರಾರಂಭಿಸಿದ್ದು ಗ್ರಾಹಕರು ಹತ್ತಿರದ ಬೆಂಗಳೂರು ಒನ್ ಕೇಂದ್ರದಲ್ಲಿ ಬಾಡಿಗೆ ಕರಾರು ಪತ್ರಗಳು ಮತ್ತು ಇತರೆ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಬಹುದು.
ಒಪ್ಪಂದದ ಕರಡಿಗೆ ಅಗತ್ಯವಾದ ವಿವರಗಳನ್ನು ನೀಡಿ, ಪಾವತಿಸಿ ದಾಖಲೆ ವಿಲೇವಾರಿಯಾಗಬೇಕಾದ ವಿಳಾಸ ನೀಡಬೇಕು. ಲೀಗಲ್‌ಡೆಸ್ಕ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಒಪ್ಪಂದ ಸೃಷ್ಟಿಸಲು, ಮುದ್ರಾಂಕ ಶುಲ್ಕ ಪಾವತಿಸಲು ಮತ್ತು ಗ್ರಾಹಕರ ಮನೆಬಾಗಿಲಿಗೆ ಒಪ್ಪಂದದ ಪ್ರತಿಯನ್ನು ಪೂರೈಸಲು ನೆರವಾಗುತ್ತದೆ.
ಈ ಸೇವೆಗೆ ಮಲ್ಲೇಶ್ವರಂನ ಬೆಂಗಳೂರು ಒನ್ ಕೇಂದ್ರದಲ್ಲಿ ಖ್ಯಾತ ನಟ ದಿಗಂತ್ ಮಂಚಾಲೆ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಚಾಲನೆ ನೀಡಿದರು. ಐಸ್ಪಿರಿಟ್‌ನ ಕಾರ್ತಿಕ್ ಅವರು ಭಾಗವಹಿಸಿದ್ದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಈ ಸೇವೆ ಲಭ್ಯವಾಗಿರುವಂತೆ ಮಾಡಿರುವುದರಿಂದ ಸಮುದಾಯದ ಎಲ್ಲ ವರ್ಗಗಳ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿದ ಬಾಡಿಗೆ ಕರಾರು ಪತ್ರಗಳು ಮತ್ತು ಕಾನೂನು ದಾಖಲೆಗಳು ಕೈಗೆಟುಕುವ ದರಗಳಲ್ಲಿ ಲಭ್ಯವಾಗುವಂತಾಗಿದೆ ಎಂದರು.

Leave a Comment