ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೀಡುಬಿಟ್ಟಿರುವ ವಲಸಿಗರು: ಕಾರ್ಮಿಕರ ಸಂಕಷ್ಟಕ್ಕೆ ಮರುಕಪಟ್ಟ ಡಿಕೆಶಿ

ಬೆಂಗಳೂರು, ಮೇ 23-ಲಾಕ್‌ಡೌನ್‌ನಿಂದ ಸಿಲುಕಿಕೊಂಡು ಇದೀಗ ತಮ್ಮ ಊರುಗಳಿಗೆ ವಾಪಸ್ಸಾಗಲು ಹೆಸರು ನೋಂದಾವಣಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಮಾಯಿಸಿದ್ದ ಹೊರ ರಾಜ್ಯಗಳ ವಲಸಿಗರನ್ನು ಇಂದು ಬೆಳಗ್ಗೆ ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರು ಅರಮನೆ ಬಳಿ ಊರಿಗೆ ತೆರಳಲು ಕಷ್ಟಪಡುತ್ತಿರುವ ಕಾರ್ಮಿಕರು ಹೊರರಾಜ್ಯದ ವಲಸಿಗರನ್ನು ನೋಡಿದರೆ ತಮಗೆ ಹೊಟ್ಟೆ ಉರಿಯುತ್ತದೆ ಎಂದು ಮರುಕಪಟ್ಟರು.

ಸರ್ಕಾರ ಹೊರ ರಾಜ್ಯದ ವಲಸಿಗರಿಗೆ ರೈಲು ಟಿಕೆಟ್ ವೆಚ್ಚ ಭರಿಸುವುದಾಗಿ ಹೇಳಿದ್ದು ಬಿಟ್ಟರೆ ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ. ನೆಲೆಯೂ ಇಲ್ಲದೇ ಊರಿಗೂ ತೆರಳಲೂ ಸಾಗದೇ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಸಂಕಷ್ಟಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೊರ ರಾಜ್ಯದ ವಲಸಿಗರ ರಕ್ಷಣೆ ಮಾಡಲು ಸರ್ಕಾರದಿಂದ ಸಾಧ್ಯವಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಲಿ. ಸರ್ಕಾರದ ಕೈಯಲ್ಲಿ ಆಗದಿದ್ದನ್ನು ತಾವೇ ಸಾಧಿಸಿ ತೋರುವುದಾಗಿ ಹೇಳಿದರು.
ಯಡಿಯೂರಪ್ಪ ಕಣ್ಣು ತೆರೆದು ನೋಡಬೇಕು. ನಾನು ಏನಾದರೂ ಮಾತನಾಡಿದರೆ ನಿಮ್ಮ ಸಚಿವರು ನನ್ನ ವಿರುದ್ಧ ಮಾತನಾಡುತ್ತಾರೆ. ಸರ್ಕಾರದ ಕೈಯಲ್ಲಿ ಆಗುವುದಿಲ್ಲ ಎಂದರೆ ಸರ್ಕಾರಕ್ಕೆ ವಲಸೆ ಕಾರ್ಮಿಕರ ಪ್ರಯಾಣಕ್ಕೆ ಚೆಕ್ ಕೊಡಲು ಸಿದ್ಧ. ಮೊದಲು ಅವರವರ ಊರುಗಳಿಗೆ ಕಳುಹಿಸಿ ಕೊಡುವ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.

Leave a Comment