ಬೆಂಗಳೂರಿಗೆ 50 ಕೆಜಿ ಗಾಂಜಾ ಸಾಗಾಣೆ ಪತ್ತೆ

ರಾಯಚೂರು, ಫೆ. ೧೩- ಬೆಂಗಳೂರಿಗೆ 50 ಕೆಜಿ ಗಾಂಜಾ ಸಾಗಿಸುತ್ತಿದ್ದ ಕಾರು ವೇಗವಾಗಿ ಹೋಗಿ ರಸ್ತೆ ದಾಟುತ್ತಿದ್ದವರಿಗೆ ಡಿಕ್ಕಿ ಹೊಡೆದು ಚಾಲಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ರಾಯಚೂರಿನ ಕಾರು ಚಾಲಕ ಹೃಷಿಕೇಶನನ್ನು ಬಂಧಿಸಿ, ಪರಾರಿಯಾಗಿರುವ ನಿತೀಶ್, ಮೋಹಿತ್, ರಾಕೇಶ್‌ಗಾಗಿ ತೀವ್ರಶೋಧ ನಡೆಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ರವಿ, ಬಾಲಪ್ಪ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಗಾಂಜಾ ಖರೀದಿಸಿದ್ದ ನಿತೀಶ್, ಮೋಹಿತ್ ಹಾಗೂ ರಾಕೇಶ್ ಕಾರಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದರು. ಚಾಲಕ ಹೃಷಿಕೇಶ್ ಸೇರಿ ಕಾರಿನಲ್ಲಿ ಹೋಗುತ್ತಿದ್ದ ನಾಲ್ವರು ಗಾಂಜಾ ಮತ್ತಿನಲ್ಲಿದ್ದರು.
ಕಾರು ವೇಗವಾಗಿ ಹೋಗುತ್ತ ರಾಯಚೂರು ಬಳಿ ರಸ್ತೆ ದಾಟುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದು ಪೂಜಾ ರೈಸ್ ಮಿಲ್ ಬಳಿಯ ತಿಪ್ಪೆಯೊಂದರ ಬಳಿ ನಿಂತಿದ್ದು, ಅದರಲ್ಲಿದ್ದ ನಿತೀಶ್, ಮೋಹಿತ್ ಹಾಗೂ ರಾಕೇಶ್ ಪರಾರಿಯಾಗಿದ್ದಾರೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 50 ಕೆಜಿ ಗಾಂಜಾ ಇದ್ದ ಬ್ಯಾಗ್ ಪತ್ತೆಯಾಗಿದೆ.
ಕಾರಿನಲ್ಲಿದ್ದ ಚಾಲಕ ಹೃಷಿಕೇಶ್‌ನನ್ನು ಬಂಧಿಸಿ ಆತನ ಜೊತೆಗೆ ಗಾಂಜಾ ಸಾಗಿಸುತ್ತಿದ್ದ ಉಳಿದ ಮೂವರಿಗಾಗಿ ಶೋಧ ನಡೆಸಲಾಗಿದೆ.

Leave a Comment