ಬೃಹತ್ ಮುನ್ನಡೆಯತ್ತ ಭಾರತ

ನವದೆಹಲಿ, ಡಿ.೫: ಕೋಟ್ಲಾ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೃಹತ್ ಮುನ್ನಡೆ ಸಾಧಿಸುವತ್ತ ಬ್ಯಾಟಿಂಗ್ ಮುಂದುವರಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವನ್ನು ೩೭೩ ರನ್‌ಗಳಿಗೆ ಅಲೌಟ್ ಮಾಡಿರುವ ಭಾರತ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇತ್ತೀಚಿನ ವರದಿ ಬಂದಾಗ ೪ ವಿಕೆಟ್ ನಷ್ಟದಲ್ಲಿ ೧೫೦ ರನ್‌ಗಳಿಸಿದ್ದು ಒಟ್ಟು ೩೦೭ರನ್ ಮುನ್ನಡೆಯಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ೧೫೫ರನ್‌ಗಳಿಸಿ ಮಿಂಚಿದ್ದ ಮುರಳಿ ವಿಜಯ್ ಇಂದು ಕೇವಲ ೯ ರನ್‌ಗಳಿಸಿ ಲಕ್ಮಲ್ ಬೌಲಿಂಗ್‌ನಲ್ಲಿ ಕೀಪರ್ ಡಿಕ್‌ವೆಲ್ಲಾಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಕ್ರಮಾಂಕ ಬದಲಿಸಿ ಬಂದ ರಹಾನೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮೂರನೇ ಕ್ರಮಾಂಕದಲ್ಲಿ ಪೂಜಾರ ಬದಲು ಬ್ಯಾಟಿಂಗ್‌ಗೆ ಇಳಿದ ಉಪನಾಯಕ ಅಜಿಂಕ್ಯಾ ರಹಾನೆ ಇಲ್ಲೂ ಬ್ಯಾಟಿಂಗ್ ಮರೆತವರಂತೆ ಆಡಿದರು. ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ ರಹಾನೆ ಗಳಿಸಿದ್ದು, ೪,೦,೨ ಹಾಗೂ ೧ ರನ್. ಆದರೆ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯೂ ರಹಾನೆ ಪಾಲಿಗೆ ಯಾವುದೇ ಬದಲಾವಣೆ ಉಂಟುಮಾಡಲಿಲ್ಲ. ೩೭ ಎಸೆತಗಳನ್ನು ಎದುರಿಸಿದ್ದಷ್ಟೆ ರಹಾನೆ ಸಾಧನೆ. ೨ ಬೌಂಡರಿಗಳಿಂದ ೧೦ ರನ್ ಗಳಿಸಿದ್ದ ವೇಳೆ ಪೆರೆರಾ ಬೌಲಿಂಗ್‌ನಲ್ಲಿ, ಲಾಂಗ್ ಆನ್‌ನಲ್ಲಿದ್ದ ಸಂದಕನ್‌ಗೆ ಕ್ಯಾಚಿತ್ತು ರಹಾನೆ ನಿರ್ಗಮಿಸಿzರು. ಇದಕ್ಕೂ ಮೊದಲು ಎರಡು ಎಲ್‌ಬಿಡಬ್ಲ್ಯೂ ಮನವಿಗಳಿಂದ ರಹಾನೆ ಕೊಂಚದರಲ್ಲಿಯೇ ಪಾರಾಗಿದ್ದರು. ಆದರೆ ಅದರ ಲಾಭವನ್ನು ಪಡೆಯಲು ರಹಾನೆಯಿಂದಾಗಲಿಲ್ಲ. ಶಿಖರ್ ಧವನ್ ಅರ್ಧಶತಕದತ್ತ ದಾಪುಗಲಿಟ್ಟಿದ್ದು, ಚೇತೇಶ್ವರ ಪೂಜಾರ ಕೇವಲ ಒಂದು ರನ್‌ನಿಂದ ಅರ್ಧಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ೪೯ ರನ್‌ಗಳಿಸಿದ್ದ ವೇಳೆ ಪೂಜಾರ, ಡಿಸಿಲ್ವ ಬೌಲಿಂಗ್‌ನಲ್ಲಿ ಮ್ಯಾಥ್ಯೂಸ್‌ಗೆ ಕ್ಯಾಚಿತ್ತು ವಾಪಾಸ್ಸಾದರು.
ಮತ್ತೆ ಮಾಸ್ಕ್ ಧರಿಸಿ ಮೈದಾನಕ್ಕಿಳಿದ ಲಂಕಾ ಆಟಗಾರರು:
ದೆಹಲಿಯ ವಾಯು ಮಾಲಿನ್ಯಕ್ಕೆ ಬೆದರಿರುವ ಶ್ರೀಲಂಕಾ ಆಟಗಾರರು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಾಸ್ಕ್ ಧರಿಸಿಕೊಂಡೇ ಮೈದಾನಕ್ಕಿಳಿದಿದ್ದರು. ಹಿಂದಿನ ದಿನಕ್ಕಿಂತಳು ದಟ್ಟವಾದ ಹೊಗೆ ಮೈದಾನವನ್ನು ಆವರಿಸಿಕೊಂಡಿತ್ತು. ಉಸಿರಾಟ ತೊಂದರೆಯಿಂದ ಬಳಲಿದ ವೇಗಿ ಸುರಂಗ ಲಕ್ಮಲ್ ಮೈದಾನದಲ್ಲೇ ವಾಂತಿ ಮಾಡಿ ಪೆವಿಲಿಯನ್‌ಗೆ ತೆರಳಿ ಕೊಂಚ ಸಮಯದ ಬಳಿಕ ಮತ್ತೆ ಮೈದಾನಕ್ಕೆ ಮರಳಿ ಎರಡನೇ ಸ್ಪೆಲ್ ಬೌಲಿಂಗ್ ಮಾಡಿದರು.
ದಿನೇಶ್ ಚಾಂಡಿಮಾಲ್ ಹೋರಾಟ: ೧೪೭ ರನ್‌ಗಳಿಸಿ ನಾಟೌಟ್ ಆಗಿದ್ದ ನಾಯಕ ಚಾಂಡಿಮಾಲ್ ಇಂದು ಮೂರು ಬೌಂಡರಿಗಳ ನೆರವಿನಿಂದ ತಮ್ಮ ಜೀವನಶ್ರೇಷ್ಟ್ರ ೧೬೪ ರನ್‌ಗಳಿಸಿ ಮಿಂಚಿದರು. ಲಷ್ಕನ್ ಸಂದಕನ್ ಜೊತೆ ಕೊನೆಯ ವಿಕೆಟ್‌ಗೆ ೩೦ ರನ್ ಸೇರಿಸಿದ ಚಾಂಡಿಮಾಲ್ ಕೊನೆಯವರಾಗಿ ಆಗಿ ನಿರ್ಗಮಿಸಿದರು. ಮತ್ತೊಂದೆಡೆ ೨೦ ಎಸೆತಗಳನ್ನು ಎದುರಿಸಿ ಖಾತೆ ತೆರೆಯದ ಸಂದಕನ್ ಕೊನೆಗೂ ನಾಟೌಟ್ ಬ್ಯಾಟ್ಸ್‌ಮನ್ ಆಗಿ ಉಳಿದರು. ದಿನದಾಟ ೬ನೇ ಓವರ್‌ನಲ್ಲಿ ಕೊನೆಯ ವಿಕೆಟ್ ಕಿತ್ತ ಭಾರತ ಲಂಕಾ ಇನ್ನಿಂಗ್ಸ್‌ಗೆ ಅಂತ್ಯ ಹಾಡಿತ್ತು.

Leave a Comment