ಬೃಹತ್ ಕೆರೆ ಅಭಿವೃದ್ಧಿ ಕಾಮಗಾರಿ ಜಾರಿಗೆ ಚಿಂತನೆ: ಶಾಂತಕುಮಾರ್

ತಿಪಟೂರು, ಆ. ೧೯- ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ವಿನೂತನ ಕಾರ್ಯಕ್ರಮದ ಮೂಲಕ ಸಾಂಕೇತಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಜಾರಿಗೆ ತರಲು ಚಿಂತನೆ ನಡೆಸಿರುವುದಾಗಿ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿಗೆ ಯಾವುದೇ ಒಂದು ಶಾಶ್ವತವಾದ ಕುಡಿಯುವ ನೀರಿನ ಯೋಜನೆಯಿಲ್ಲದೇ ಬರಗಾಲವನ್ನು ಎದುರಿಸುವ ಸಂದರ್ಭ ಬಂದೊದಗಿದೆ. ಪ್ರತಿ ಗ್ರಾಮಗಳಲ್ಲಿಯೇ ಇರುವಂತಹ ಕೆರೆ, ಕಟ್ಟೆಗಳಿಗೆ ಒಳಹರಿವು ಬರುವಂತಹ ಅನೇಕ ಮೂಲಗಳು ಮುಚ್ಚಿ ಹೋಗಿ ಗಿಡ, ಪೊದೆಗಳಿಂದ ಆವೃತವಾಗಿ ನಶಿಸುವ ಹಂತದಲ್ಲಿವೆ. ಅಂತಹ ಕೆರೆ-ಕಟ್ಟೆಗಳನ್ನು ಜೆಸಿಬಿ ಯಂತ್ರದ ಮೂಲಕ ಅಭಿವೃದ್ಧಿಪಡಿಸಿ ನೀರು ಬಂದು ನಿಲ್ಲುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜನರ ಬೆಂಬಲ ದೊರೆತು ಜನಪ್ರತಿನಿಧಿಯಾದರೆ ಶಾಶ್ವತ ನೀರಾವರಿ ಯೋಜನೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಕಾರ್ಯಕ್ರಮದ ಮೂಲಕ ಜನಸಾಮಾನ್ಯರಲ್ಲಿ ತಮ್ಮ ಗ್ರಾಮಗಳ ಕೆರೆಗಳ ಪ್ರಯೋಜನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರಾಯೋಗಿಕವಾಗಿ ಕೆಲ ಆಯ್ದ ಕೆರೆಗಳನ್ನು ಆರಿಸಿಕೊಂಡು ಅಭಿವೃದ್ಧಿಪಡಿಸಲು ಮುಂದಾಗಿರುವುದಾಗಿ ತಿಳಿಸಿದರು.

ಹಿಂದಿನ ಜನಪ್ರತಿನಿಧಿಗಳು ಹಾಗೂ ಹಾಲಿ ಇರುವಂತಹ ಜನಪ್ರತಿನಿಧಿಗಳು ಜನರಿಗಾಗಿ ಆಡಳಿತ ನಡೆಸುವಂತಹ ಮನೋಭಾವವನ್ನು ಹೊಂದಬೇಕಿದ್ದು, ಜನರ ಸಮಸ್ಯೆಗಳು, ಅವಶ್ಯತೆಗಳ ಬಗ್ಗೆ ಅರಿತು ಕಾರ್ಯನಿರ್ವಹಿಸಬೇಕಿದೆ. ಕೆಲ ದಿನಗಳಿಂದ ತಾಲ್ಲೂಕಿನಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಹೇಮಾವತಿ ನೀರಿನ ವಿಚಾರವಾಗಿ ಬಂದ್‌ಗಳನ್ನು ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡಲು ಮುಂದಾಗಿದ್ದಾರೆ. ಕಳೆದ ವರ್ಷವೂ ಹೇಮಾವತಿ ನೀರನ್ನು ಬಿಟ್ಟಿರಲಿಲ್ಲ. ಆಗ ಯಾರೊಬ್ಬರು ಇದರ ಬಗ್ಗೆ ಪ್ರಶ್ನಿಸುವ ಆಲೋಚನೆಯನ್ನೇ ಮಾಡಿರಲಿಲ್ಲ. ಜನರ ಅವಶ್ಯಕತೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಪ್ರಾಮಾಣಿಕ ಪ್ರಯತ್ನದಿಂದ ಜನರಿಗೆ ಸಹಾಯ ಮಾಡಲು ಮುಂದಾಗಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಟಿ.ಶಾಂತಕುಮಾರ್ ಅಭಿಮಾನಿ ಬಳಗದ ಉಪಾಧ್ಯಕ್ಷ ಹೇಮಂತ್, ಹುಚ್ಚಗೊಂಡನಹಳ್ಳಿ ಗೌರೀಶ್, ಉದಯ್‌ಕುಮಾರ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

Leave a Comment