ಬುಸುಗುಟ್ಟಿದ ಎಂಟಿಬಿ

ಬೆಂಗಳೂರು, ಆ. ೩0- ನನ್ನನ್ನು ಕೆಣಕುವುದು ಒಂದೇ, ಹುತ್ತದಲ್ಲಿ ಮಲಗಿರುವ ನಾಗರ ಹಾವನ್ನು ಕೆಣಕುವುದೂ ಒಂದೇ, ಸುಖಾ ಸುಮ್ಮನೆ ತಂಟೆಗೆ ಬಂದರೆ ಕಚ್ಚುವುದು ಗ್ಯಾರೆಂಟಿ ಎಂದು ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ಗುಡುಗಿದ್ದಾರೆ.

ನಾನು ಯಾರಿಗೂ ಹೆದರುವುದಿಲ್ಲ. ಹೆದರುವುದೇನಿದ್ದರೂ ಮತದಾರರಿಗೆ ಮತ್ತು ದೇವರಿಗೆ ಮಾತ್ರ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಜನ್ಮದಿನದ ಪ್ರಯುಕ್ತ ಮಹಿಳೆಯರಿಗೆ ಸೀರೆ ಹಂಚಿ ಮಾತನಾಡಿದ ಅವರು, ಹಲವು ಬಾರಿ ಮಂತ್ರಿಯಾಗಿ ಲೂಟಿ ಹೊಡೆದಿರುವ ನಾಯಕರ ದಾಖಲೆಗಳು ನನ್ನ ಬಳಿ ಇದೆ. ಅಧಿಕಾರವಿದ್ದಾಗ ಎಷ್ಟು ಆಸ್ತಿ ಮಾಡಿದ್ದೀರಿ ಎನ್ನುವ ವಿವರವೂ ಇದೆ ಎಂದು ಹೇಳಿದ್ದಾರೆ.

ನನ್ನ ವಿರುದ್ಧ ಆರೋಪ ಮಾಡುವ ನಾಯಕರು ದಾಖಲೆ ಇದ್ದರೆ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಬಿಜೆಪಿಯಿಂದ 30 ಕೋಟಿ ರೂ. ಪಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇವ್ಯಾವು ಸತ್ಯಕ್ಕೆ ದೂರವಾದ ಸಂಗತಿ.

ಕಲ್ಮಶ ರಾಜಕೀಯದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ಹೊರತು ಯಾರಿಂದಲೂ ಹಣ ಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Leave a Comment