‘ಬುಲ್‌ಬುಲ್’ ಅವಾಂತರ: ೨ ಸಾವು, ವಿದ್ಯುತ್ ಕಡಿತ

ಭುವನೇಶ್ವರ/ಕೋಲ್ಕತ್ತಾ, ನ. ೧೦: ಬುಲ್‌ಬುಲ್ ಚಂಡಮಾರುತದ ಪರಿಣಾಮವಾಗಿ ಬಿದ್ದ ಭಾರಿ ಮಳೆಯಿಂದಾಗಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ತಲಾ ಒಬ್ಬರಂತೆ ಒಟ್ಟು ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ರಾತ್ರಿ ಸುಮಾರು ೮-೩೦ಕ್ಕೆ ಪಶ್ಚಿಮ ಬಂಗಾಳದ ಸಾಗರ್ ದ್ವೀಪ ಹಾಗೂ ಫ್ರೆಜರ್‌ಗಂಜ್‌ನಲ್ಲಿ ಬುಲ್‌ಬುಲ್ ಚಂಡಮಾರುತ ಕಾಣಿಸಿಕೊಂಡಿತು. ಚಂಡಮಾರುತವು ಸುಂದರಬನ್ ದಾಟಿ ಹೋಗಲು ಕನಿಷ್ಟ ೩ ಗಂಟೆಗಳಷ್ಟು ಕಾಲಾವಧಿ ತೆಗೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಚಂಡಮಾರುತದ ಹೊಡೆತಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಊರಿಗೆ ಊರೇ ಕತ್ತಲಲ್ಲಿ ಮುಳುಗಿವೆ. ಮರಗಳು ಬುಡಮೇಲಾಗಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ನಿರಾಶ್ರಿತ ನಿವಾಸಿಗಳು ಆಶ್ರಯಕ್ಕಾಗಿ ಸ್ಥಳೀಯ ಹೋಟೆಲ್‌ಗಳಿಗೆ ನುಗ್ಗಿದರು. ಮೇಲ್ಛಾವಣಿಯ ಕಲ್ನಾರು ಶೀಟೊಂದು ತಲೆ ಮೇಲೆ ಬಿದ್ದ ಪರಿಣಾಮ ಕೇಂದ್ರಪಾರ ಜಿಲ್ಲೆಯ ನಿವಾಸಿ ಜ್ಞಾನೇಶ್ವರ ಮಲ್ಲಿಕ್ ಎಂಬುವರು ಮೃತಪಟ್ಟರು. ಕೊಲ್ಕತ್ತಾದಲ್ಲಿ ಕ್ಲಬ್‌ವೊಂದರಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ ಮರ ಬಿದ್ದು ಆತ ಮೃತಪಟ್ಟಿದ್ದಾರೆ.
ಒಡಿಶಾದ ವಿಶೇಷ ಪರಿಹಾರ ಅಯುಕ್ತ ಪಿ.ಕೆ. ಜೆನಾ ಹೇಳಿಕೆ ನೀಡಿ, ರಾಜ್ಯದ ಇತರ ಕರಾವಳಿ ಜಿಲ್ಲೆಗಳಾದ ಭದ್ರಕ್, ಜಗತ್ಸಿಂಗ್‌ಪುರ ಮತ್ತು ಬಲಸೋರೆಗಳಲ್ಲಿ ಪ್ರಬಲವಾದ ಗಾಳಿ ಬೀಸುತ್ತಿದ್ದು ಮರಗಳು ಬುಡಮೇಲಾಗಿ, ವಿದ್ಯುತ್ ಕಂಬಗಳು ಧರೆಗುರುಳಿ ತಂತಿಗಳೆಲ್ಲಾ ಕಿತ್ತು ಚೆಲ್ಲಾಪಿಲ್ಲಿಯಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ವಿವರಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) ೬ ತಂಡಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾಪಡೆ (ಒಡಿಆರ್‌ಎಎಫ್) ತಂಡಗಳು, ಅಗ್ನಿ ಶಾಮಕ ಸೇವಾ ಸಿಬ್ಬಂದಿ ಒಟ್ಟಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಚಂಡಮಾರುತ ಪೀಡಿತ ಪ್ರದೇಶಗಳಿಂದ ಸುಮಾರು ೫,೦೦೦ ಸಂತ್ರಸ್ತರನ್ನು ಸ್ಥಳಾಂತರಿಸಲಾಗುತ್ತಿದೆ. ಭದ್ರಕ್ ಜಿಲ್ಲೆಯ ಬಂಗಾಳ ಕೊಲ್ಲಿಯಲ್ಲಿ ಮೀನು ಹಿಡಿಯಲು ಹೋಗಿದ್ದವರ ದೋಣಿ ಮಗುಚಿಕೊಂಡಾಗ ಅದರಲ್ಲಿದ್ದ ೮ ಮೀನುಗಾರರನ್ನು ಒಡಿಆರ್‌ಎಎಫ್ ತಂಡವೊಂದು ರಕ್ಷಿಸಿದೆ ಎಂದು ಹೇಳಲಾಗಿದೆ.

Leave a Comment