ಬುಡಕಟ್ಟು ಜನಾಂಗಗಳ ಸಬಲೀಕರಣಕ್ಕೆ ಕಂಪನಿಗಳು ಕೈಜೋಡಿಸಿ

ಮೈಸೂರು. ಆ.13- ವಿವಿಧ ಅಂತರ್ಗತ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತೀಯ ಬುಡಕಟ್ಟು ಜನಾಂಗದ ಒಳಗೊಳ್ಳುವಿಕೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಭಾರತೀಯ ಕಂಪನಿಗಳು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವುದು ಇಂದಿನ ತುರ್ತು ಅಗತ್ಯ ಎಂದು ಭಾರತೀಯ ಮಾನವ ಶಾಸ್ತ್ರೀಯ ಸರ್ವೇಕ್ಷಣಾಲಯದ ಕಲ್ಕತ್ತಾ ಮುಖ್ಯ ಕಛೇರಿಯ ಉಪನಿರ್ದೇಶಕ ಡಾ.ಎಂ.ಶಶಿಕುಮಾರ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಹೊರಗೊಳ್ಳುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ ಒಳಗೊಳ್ಳುವಿಕೆಯ ಬೆಳವಣಿಗೆ ಮತ್ತು ಅಭಿವೃದ್ಧಿ ಸಂಶೋಧನಾ ಕೇಂದ್ರ ಮೈಸೂರು ಮತ್ತು ಬಾಸುದೇವ ಸೋಮಾನಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಎರಡು ದಿನಗಳ ‘ಬುಡಕಟ್ಟು ಅಭಿವೃದ್ಧಿ ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಗಳು’ ಎಂಬ ವಿಷಯದ ಕುರಿತ ವಿಚಾರಸಂಕಿರಣವನ್ನಿಂದು ಉದ್ಘಾಟಿಸಿ ಮಾತನಾಡಿದರು. ಬುಡಕಟ್ಟು ಜನರ ಬಡತನ, ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಇಂತಹ ವಿಚಾರಗಳಲ್ಲಿ ಕಂಪನಿಗಳು ಸಾಕಷ್ಟು ಗಮನವಹಿಸುವುದು ಅಗತ್ಯ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಡೀನ್ ಪ್ರೊ.ಜಗದೀಶ್, ಭಾರತೀಯ ಕಂಪನಿಗಳು ಬಹಳ ಹಿಂದಿನಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದು, ಬುಡಕಟ್ಟು ಜನಾಂಗಗಳ ಸಬಲೀಕರಣಕ್ಕೆ ತಮ್ಮ ಲಾಭದ ಒಂದು ಭಾಗವನ್ನು ಬಳಸಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಮಹದೇವಯ್ಯ ಮಾತನಾಡಿ ಬುಡಕಟ್ಟು ಜನರ ತ್ವರಿತ ಅಭಿವೃದ್ಧಿಯಲ್ಲಿ ಸರ್ಕಾರದೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಕಂಪನಿಗಳು ಕೈ ಜೋಡಿಸಬೇಕು. ಇದರಿಂದ ಬುಡಕಟ್ಟು ಜನಾಂಗ ತ್ವರಿತವಾಗಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಇದೇ ವೇಳೆ ಡಾ.ಡಿ.ಸಿ.ನಂಜುಂಡರವರ ಕೃತಿ ‘ ಬುಡಕಟ್ಟು ಅಭಿವೃದ್ಧಿ: ಸ್ಥಿತ್ಯಾಂತರ ಮತ್ತು ಸವಾಲುಗಳು’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎನ್.ನಾಗರಾಜು, ಡಾ.ಪುಟ್ಟಸ್ವಾಮಿ, ಪ್ರೊ.ಎಸ್.ಎನ್.ವೇಣುಗೋಪಾಲ್, ಡಾ.ಡಿ.ಸಿ.ನಂಜುಂಡ, ಡಾ.ವಿ.ಜಿ.ಸಿದ್ದರಾಜು,ಡಾ.ಪಿ.ಟಿ.ದಿನೇಶ್, ಡಾ.ಪಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment