ಬುಕ್ಕಾಪಟ್ಟಣ ರೈತರಂತೆ ಚಿ.ನಾ.ಹಳ್ಳಿ ರೈತರು ಬದಲಾಗಲಿ

ಹುಳಿಯಾರು, ಸೆ. ೧೧- ಸಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ರೈತರು ತಮ್ಮ ಸಾಂಪ್ರದಾಯಿಕ ಕೃಷಿ ಜತೆಗೆ ರೇಷ್ಮೆ ಬೆಳೆಯಲು ಉತ್ಸುಕತೆ ತೋರುತ್ತಿದ್ದಾರೆ. ಆ ಭಾಗದಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ರೇಷ್ಮೆ ಕಡ್ಡಿಗೆ ಇನ್ನಿಲ್ಲದ ಬೇಡಿಕೆಯಿಟ್ಟ ಪರಿಣಾಮ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿದ್ದ ನಲವತ್ತು ಸಾವಿರ ರೇಷ್ಮೆ ಕಡ್ಡಿ ಕೊಡಿಸಿದ್ದೇನೆ. ಆದರೆ ಚಿ.ನಾ.ಹಳ್ಳಿ ತಾಲ್ಲೂಕಿನ ರೈತರು ಇದರ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಇನ್ನಾದರೂ ಬಕ್ಕಾಪಟ್ಟಣ ಹೋಬಳಿಯ ರೈತರ ರೀತಿ ಚಿ.ನಾ.ಹಳ್ಳಿ ರೈತರು ಬದಲಾಗಲಿ ಎಂದು ಶಾಸಕ ಜೆ.ಸಿ. ಮಾಧುಸ್ವಾಮಿ ಸಲಹೆ ನೀಡಿದರು.

ಹಂದನಕೆರೆ ಹೋಬಳಿ ಗೂಬೇಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಳೆಯನ್ನು ನೆಚ್ಚಿಕೊಂಡು ಕೃಷಿ ಮಾಡುವ ರೈತರು ಇಂದು ಉಪಕಸುಬು ಮಾಡಿದರೆ ಮಾತ್ರ ಇನ್ನೊಬ್ಬರ ಹಂಗಿಲ್ಲದೆ ಬದುಕಬಹುದಾಗಿದೆ. ಜತೆಗೆ ವೈಜ್ಞಾನಿಕವಾಗಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೈನುಗಾರಿಕೆ ಮಾಡುವವರು ಕಡ್ಡಾಯವಾಗಿ ಕನಿಷ್ಠ 5 ಕುಂಟೆ ಹಸಿರು ಮೇವು ಬೆಳೆಯಬೇಕಿದೆ. ಹಸು ಸಾಕಾಣಿಕೆಯ ಜತೆಗೆ ಕುರಿ, ಕೋಳಿ, ಮೊಲ, ಮೀನು ಇವುಗಳನ್ನು ಸಾಕಿದರೆ ಆರ್ಥಿಕ ಸಬಲತೆ ಸಾಧ್ಯ ಎಂದರು.

ಹಣ ಮನುಷ್ಯನಲ್ಲಿ ಚಂಚಲತೆ ಮತ್ತು ಚಪಲತೆ ಕಲಿಸಿ ಅರಮನೆಯಿಂದ ಸೆರೆಮನೆಯವರೆವಿಗೂ ಕೂರಿಸುತ್ತದೆ. ಹಾಗಾಗಿ ಸಹಕಾರ ಸಂಘಗಳು ಅಭಿವೃದ್ಧಿಯಾಗಲು ಹಣಕಾಸಿನ ನಿರ್ವಹಣೆ ಉತ್ತಮವಾಗಿರಬೇಕು. ವೆಚ್ಚವನ್ನು ಕಡಿಮೆ ಮಾಡಿ ಉಳಿತಾಯಕ್ಕೆ ಮೊದಲ ಆದ್ಯತೆ ಕೊಡಬೇಕು. ಅಲ್ಲದೆ ಕಡ್ಡಾಯವಾಗಿ ಆಡಳಿತ ಮಂಡಳಿ ಲೆಕ್ಕ ಪರಿಶೋಧನೆ ಮಾಡಬೇಕು. ಇಲ್ಲವಾದಲ್ಲಿ ಜೇನು ಕಿತ್ತೋನು ಜೇನು ನೆಕ್ಕದೆ ಬಿಡುವನೆ ಎನ್ನುವಂತಾಗುತ್ತದೆ ಎಚ್ಚರ ಎಂದರು.

ಹಿಂದೆ ಕಾಡಿ ಬೇಡಿದರೂ ಅಂಗನವಾಡಿ ಹುದ್ದೆಗೆ ಸೇರೋಕೆ ಬರ್ತಿರಲಿಲ್ಲ. ಈಗ ಹುದ್ದೆ ಖಾಲಿಯಾದರೆ ಸಾಕು ಊರಿಗೆ ಊರೆ ಅರ್ಜಿ ಹಾಕುತ್ತಾರೆ. ಗಂಗಾ ಕಲ್ಯಾಣ ಕೊಳವೆ ಬಾವಿಯನ್ನು ಊರಲ್ಲಿ ಸಭೆ ಮಾಡಿ ಅರ್ಹರನ್ನು ಗುರುತಿಸಿ ಹಂಚುತ್ತಿದ್ದೆವು. ಆದರೆ ಇಂದು 70 ದೇವರಾಜು ಅರಸು ಸಾಲಕ್ಕೆ 8 ಸಾವಿರ ಅರ್ಜಿ ಬಂದಿವೆ. ಅರ್ಹರನ್ನು ಗುರುತಿಸಲು ಹೋದರೆ ಕಾರ್ಯಕರ್ತರ ಮುನಿಸು ಎದುರಿಸಬೇಕಿದೆ. ಏಕೆಂದರೆ ಈಗ ಸರ್ಕಾರದ ಪುಕ್ಸಟ್ಟೆ ಸ್ಕೀಂಗಳು ಎಲ್ಲರಿಗೂ ಬೇಕಾಗಿದೆ. ತಾಲ್ಲೂಕಿನಲ್ಲಿ ಈಗಲೇ ನೀರಿನ ಹಾಹಾಕಾರ ಸೃಷ್ಠಿಯಾಗಿದ್ದು, ಮಳೆಯಿಲ್ಲದೆ ಬಿಸಿಲು ಹೀಗೆಯೇ ಮುಂದುವರಿದರೆ ನೀರಿನ ಸಮಸ್ಯೆ ಉದ್ಬವಿಸುತ್ತದೆ ಎಂಬ ಭಯ ಉಂಟಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೆಶಕ ಹಳೆಮನೆ ಶಿವನಂಜಪ್ಪ, ಗೂಬೇಹಳ್ಳಿ ಹಾಲಿನ ಡೇರಿ ಅಧ್ಯಕ್ಷೆ ದೇವಿರಮ್ಮ, ಗ್ರಾಮದ ಹಿರಿಯ ಮುಖಂಡ ಹನುಮೇಗೌಡ, ಜಿ.ಪಂ. ಸದಸ್ಯೆ ಮಂಜುಳಮ್ಮ, ತಾ.ಪಂ. ಸದಸ್ಯ ಕೇಶವಮೂರ್ತಿ, ತುಮುಲು ವ್ಯವಸ್ಥಾಪಕ ಡಾ.ಎಸ್. ನರಸಿಂಹನ್, ಉಪವ್ಯವಸ್ಥಾಪಕ ಡಾ.ಪಿ.ಕೆ. ನಿಜಲಿಂಗಪ್ಪ, ಎ.ಪಿ. ಯರಗುಂಟಪ್ಪ, ವಿಸ್ತರಣಾಧಿಕಾರಿ ಮಹೇಶ್, ಸಿ. ರಾಜು, ಆರ್.ವೈ. ಸುನೀಲ್, ನಂದಿಹಳ್ಳಿ ಡೇರಿ ಅಧ್ಯಕ್ಷ ನಂದಿಹಳ್ಳಿ ಶಿವಣ್ಣ, ಧರ್ಮಸ್ಥಳ ಯೋಜನೆಯ ಕೃಷಿ ಅಧಿಕಾರಿ ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Comment