ಬೀದರ ಅಭಿವೃದ್ಧಿಯಲ್ಲಿ ಬಲಬೀರಸಿಂಗರದ್ದು ಎತ್ತಿದ ಕೈ: ಪ್ರೊ.ಮಹೇಶ್ವರಯ್ಯ

ಬೀದರ: ಇಡೀ ದೇಶ ಬೀದರ್‍ನತ್ತ ಮುಖ ಮಾಡಿ ನೋಡುವಂತಾಗಿದ್ದರೆ ಅದು ಡಾ.ಬಲಬೀರ್‍ಸಿಂಗರ ಕೊಡುಗೆ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಹೆಚ್.ಎಮ್.ಮಹೇಶ್ವರಯ್ಯ ಹೇಳಿದರು.

ಸೋಮವಾರ ಸಂಜೆ ನಗರದ ರಂಗಮಂದಿರದಲ್ಲಿ ಇತ್ತಿಚೀಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕøತ ಸರ್ದಾರ ಡಾ.ಬಲಬೀರಸಿಂಗ್ ಅವರಿಗೆ ನಾಗರಿಕ ಅಭಿನಂದನಾ ಸಮಿತಿ ಬೀದರ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಮಾತುಗಳನ್ನಾಡಿದರು.

ದೇಶದ ಪ್ರಗತಿಯಲ್ಲಿ  ಶಿಕ್ಷಣದ ಮಹತ್ವ ಬಹು ಮುಖ್ಯ  ಪಾತ್ರ ವಹಿಸಲಿದ್ದು, ಈ ನಿಟ್ಟಿನಲ್ಲಿ 10 ಸಾವಿರ  ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿರುವುದಲ್ಲದೆ, ಬೀದರ್ ಐತಿಹಾಸಿಕ ಸ್ಥಳವನ್ನಾಗಿ ಪರಿವರ್ತಿಸಿದ ಕೀರ್ತಿ ಡಾ.ಬಲಬೀರಸಿಂಗ್ ಕುಟುಂಬಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಮನುಷ್ಯ ಬೇರೆಯವರ ಅಳುವಿನಲ್ಲಿ ಭಾಗಿಯಾಗಿ, ಬದುಕಿನುದ್ದಕ್ಕೂ ತನಗೆ ಬರುವ ಕಷ್ಟ, ಸುಖಗಳಿಗೆ ಕ್ಯಾರೆ ಎನ್ನದೆ, ಮುನ್ನುಗ್ಗುವ ಸ್ವಭಾವ ಬೆಳೆಸಿಕೊಳ್ಳಬೇಕು. ಅಂತಹ ಔದಾರ್ಯ ಬಲಬೀರಸಿಂಗ್‍ರಲ್ಲಿ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಸ್ಯೆಗಳು ಬಂದರೆ ಮೌನ ವಹಿಸಿಬೇಕು, ಅದನ್ನು ಎದುರಿಸಲು ನಗು ಅಗತ್ಯ, ಚಿಂತೆ, ಕಂತೆಗಳಿಗೆ ಸ್ವತಂತ್ರವಾಗಿಡಬೇಕು, ಅವನ್ನು ಎದುರಿಸುವ ಮರದಂಥ ಎದೆಗಾರಿಕೆ ಬೆಳೆಸಿಕೊಂಡು ಹೂವಿನಂಥ ಬದುಕು ನಮ್ಮದಾಗಬೇಕು, ಗಟ್ಟಿಯಾದ ಅಕ್ಕಿ ಬೆಂಕಿ, ನೀರಿನ ಸ್ಪರ್ಶ ಪಡೆದು ಅನ್ನವಾಗುವಂತೆ ಕಲ್ಲಾಗಿರುವಂಥ ನಮ್ಮ ಮನಸ್ಸು ಸಜ್ಜನರ ಸಂಗ ಹಾಗೂ ಉತ್ತಮರ ಮಾರ್ಗದರ್ಶನ ಪಡೆದು ಪರಿಶುದ್ಧವಾಗಿಸಿಕೊಳ್ಳಬೇಕು. ಅಳುತ್ತ ಹುಟ್ಟುವ ನಾವು ಈಹಲೋಕ ತ್ಯಜಿಸಿದಾಗ ಜನರಿಂದ ಅಳಿಸಿಕೊಳ್ಳಬೇಕು. ಅಂತಹ ಗುಣ ಶ್ರೀಮಂತಿಕೆಯ ಬದುಕು ನಮ್ಮದಾದರೆ ಅದು ಅಭಿನಂದನೆಗೆ ಅರ್ಹವಾಗಿರುತ್ತದೆ ಎಂದು ಪ್ರತಿಪಾದಿಸಿದರು.

ಸಾನಿಧ್ಯ ವಹಿಸಿದ ಸಿದ್ಧಾರೂಢ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಜಿ ಮಾತನಾಡಿ, ನಾವು ಬದುಕಬೇಕೆ ವಿನಃ ಜೀವಿಸಬಾರದು. ನಿರ್ದಿಷ್ಠ ಉದ್ದೇಶ ಸಾಧನೆಗಾಗಿ ಮನುಷ್ಯನಾಗಿ ಹುಟ್ಟಿದ ನಾವು ಗುಣ ಹಾಗೂ ಸತ್ಕರ್ಮದಿಂದ ಕೀರ್ತಿ ಹಾಗೂ ಗೌರವಕ್ಕೆ ಪಾತ್ರರಾಗುತ್ತೇವೆ. ಹಣದಿಂದ ನಾಮಿಯಾಗದೆ, ಗುಣದಿಂದ ಅನುಗಾಮಿಯಾಗಬೇಕೆಂದು ಕರೆ ಕೊಟ್ಟರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿ, ಆದರ್ಶ ಶಿಕ್ಷಣ ಸಂಸ್ಥೆಗಳಿದ್ದಲ್ಲಿ ಜೈಲುಗಳ ಅಗತ್ಯವಿಲ್ಲ. ಅಂಥ ಆದರ್ಶ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಗುರುನಾನಕ ಶಿಕ್ಷಣ ಸಂಸ್ಥೆ ಬೀದರ್ ಜಿಲ್ಲೆಯ ಹಿಂದುಳಿದ ಹಣೆಪಟ್ಟಿ ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದೆ ಎಂದರು.

ಸನ್ಮಾನಿತರಾಗಿ ಮಾತನಾಡಿದ ಡಾ.ಬಲಬೀರಸಿಂಗ್, ಪ್ರಗತಿಯ ಕನಸ್ಸು ಕಟ್ಟಲು ಗುರುನಾನಕರು ಶಕ್ತಿ ತುಂಬಿದರೆ, ನನ್ನ ಪೂರ್ವಜರು ಯುಕ್ತಿ ಕಲಿಸಿದರು. ಅದನ್ನು ನನಸ್ಸು ಮಾಡಲು ಇಲ್ಲಿಯ ಜನರು ಸ್ಪೂರ್ತಿ ಭರಿಸಿದರು. ಹೀಗೆ ಮುಂದೆಯೂ ತನ್ನ ಕುಟುಂಬಕ್ಕೆ ಚೈತನ್ಯ ತುಂಬುವ ಕಾರ್ಯ ಇಲ್ಲಿಯವರು ಮಾಡಲಿ ಎಂದರು.

ಬಲಬೀರಸಿಂಗ್‍ರ ಧರ್ಮಪತ್ನಿ ರೇಷ್ಮಾ ಕೌರ್ ಮಾತನಾಡಿದರು. ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಚೆನ್ನಬಸಪ್ಪ ಹಾಲಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸಂಚಾಲಕ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ಶಾಹಿನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಅಬ್ದುಲ್ ಖದೀರ್, ಬೀದರ್ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶಟಕಾರ, ಜ್ಞಾನ ಕಾರಂಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಸವರಾಜ ಭರಶೆಟ್ಟಿ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ ಇದ್ದರು.

ಜಿಲ್ಲೆಯ ವಿವಿಧ  ಸಂಘ, ಸಂಸ್ಥೆಗಳಿಂದ ಬಲಬೀರಸಿಂಗ್ ದಂಪತಿಗಳಿಗೆ ಈ ಸಂದರ್ಭದಲ್ಲಿ ಅದ್ದೂರಿ ಸನ್ಮಾನ ಜರುಗಿತು.

ಆರಂಭದಲ್ಲಿ ಶಿವಕುಮಾರ  ಪಾಂಚಾಳ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ನಾಗರಿಕ ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಸರ್ವರನ್ನು ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ವಂದಿಸಿದರು.

Leave a Comment