ಬೀದರ್‌ನಲ್ಲಿ ಸಹಕಾರ ಸಪ್ತಾಹ

ಬೆಂಗಳೂರು, ಅ. ೧೨- 65ನೇ ಅಖಿಲ ಭಾರತ ಸಹಕಾರ ಸಪ್ತಾಹ ನವೆಂಬರ್ 14 ರಿಂದ 20ರವರೆಗೆ ನಡೆಯಲಿದ್ದು, ಬೀದರ್ ನಲ್ಲಿ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಗ್ರಾಮೀಣ ಸಂಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಈ ಬೆಳವಣಿಗೆ ಈ ಬಾರಿಯ ಸಹಕಾರ ಸಪ್ತಾಹದ ಧೇಯ್ಯ ವಾಕ್ಯವನ್ನಾಗಿ ಆಯ್ಕೆ ಮಾಡಲಾಗಿದೆ.

ರೈತಸಾಲ ಮನ್ನಾ
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವ ಸರ್ಕಾರ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ 9 ಸಾವಿರ 448 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ಇದರಿಂದ 22ಲಕ್ಷ ರೈತರಿಗೆ ನೆರವಾಗಿದೆ. ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ 9ಸಾವಿರ 165 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದ್ದರು.
ಬಂಡೆಪ್ಪ ಕಾಶೆಂಪುರ್
ಸಹಕಾರ ಸಚಿವರು.

ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನ. 14 ರಂದು 65 ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಬೀದರ್ ನಲ್ಲಿ ನಡೆಸಲು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಮಂಡಳದ ಅಧ್ಯಕ್ಷರು ಮತ್ತು ಸದಸ್ಯರುಗಳ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತ ನಿರ್ಣಯ ಕೈಗೊಳ್ಳಲಾಯಿತು.

ಪ್ರತಿವರ್ಷದಂತೆ ಈ ವರ್ಷ ನೀಡಲಾಗುವ ಸಹಕಾರ ಸಪ್ತಾಹ ಪ್ರಶಸ್ತಿಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಆಯ್ಕೆ ಸಮಿತಿಯನ್ನು ರಚಿಸುವ ನಿರ್ಧಾರ ಕೈಗೊಳ್ಳಲಾಯಿತು.

ಪೂರ್ವಭಾವಿ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಅವರು ಸಹಕಾರ ಸಪ್ತಾಹ ಅಂಗವಾಗಿ 7ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

14 ರಂದು ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿಯವರು ಉದ್ಘಾಟಿಸಲಿದ್ದಾರೆ. ಅಂದು ಕಾರ್ಯಕ್ರಮದ ಬಳಿಕ ಸಹಕಾರಿ ಮಾರಾಟ ಸಂಸ್ಕರಣ ಮತ್ತು ಶೇಖರಣೆ ಕುರಿತ ಕಾರ್ಯಕ್ರಮ, 15 ರಂದು ಶಿರಸಿಯಲ್ಲಿ ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳದ ಕೃಷಿಯಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖ ಪಾತ್ರ, 16 ರಂದು ಬೆಂಗಳೂರು ನಗರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ ಕುರಿತ ಕಾರ್ಯಾಗಾರಗಳು ನಡೆಯಲಿವೆ ಎಂದರು.

ನ. 17 ರಂದು ತುಮಕೂರಿನಲ್ಲಿ ಸಾರ್ವಜನಿಕ, ಖಾಸಗಿ ಸಹಕಾರಿ ಸಹಭಾಗಿತ್ವ ನಿರ್ಮಾಣ, 18 ರಂದು ಹಾವೇರಿಯಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸರ್ಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತ ಜಾಗೃತಿ ಮೂಡಿಸುವುದು , 19 ರಂದು ರಾಯಚೂರಿನಲ್ಲಿ ಯುವಜನ ಮಹಿಳಾ ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು, 20 ರಂದು ಶಿವಮೊಗ್ಗದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ, ತಾಂತ್ರಿಕ ಕತೆ, ಅಭಿವೃದ್ಧಿ ಪಡಿಸುವ ಕುರಿತು ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ಸಚಿವ ಕಾಶಂಪುರ ಅವರು ತಿಳಿಸಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವಂತೆ ಸಚಿವರುಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಪ್ರತಿ ಕಾರ್ಯಕ್ರಮಗಳ ಬಗ್ಗೆ ಛಾಯಾಚಿತ್ರಗಳನ್ನು ಒಳಗೊಂಡಂತೆ ಸಂಪೂರ್ಣ ವರದಿಯನ್ನು ತಮಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Leave a Comment