ಬೀಜ, ರಸಗೊಬ್ಬರ ಪೂರೈಸಲು ಸಿಎಂ ಸೂಚನೆ

ಬೆಂಗಳೂರು, ಜೂ. ೧೨- ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಸಕಾಲಕ್ಕೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಅಗತ್ಯಕ್ರಮ ಕೈಗೊಳ್ಳಬೇಕು, ಬಿಪಿಎಲ್ ಪಡಿತರ ಚೀಟಿಯ ಗೊಂದಲವನ್ನು ಆದಷ್ಟು ಬೇಗ ನಿವಾರಣೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗಿಂದು ತಾಕೀತು ಮಾಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಎರಡು ದಿನಗಳ ಸಮ್ಮೇಳನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮುಂಗಾರು ರಾಜ್ಯಕ್ಕೆ ಈಗಷ್ಟೇ ಪ್ರವೇಶಿಸಿದ್ದು, ರೈತರಿಗೆ ಅಗತ್ಯ ಬಿತ್ತನೆಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಅಧಿಕಾರಿಗಳು ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಬಿಪಿಎಲ್ ಕಾರ್ಡುಗಳನ್ನು ಆಧಾರ್‌ಗೆ ಲಿಂಕ್ ಮಾಡುವ ಸಲುವಾಗಿ ಹೊಸದಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಒದಗಿಸಬೇಕೆಂಬ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶದ ಹಿನ್ನೆಲೆಯಲ್ಲಿ ಜನಸಮಾನ್ಯರು ನಾಡ ಕಚೇರಿಗಳ ಮುಂದೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಬಂದಿವೆ.
ಈ ರೀತಿಯ ಗೊಂದಲಗಳನ್ನು ಆದಷ್ಟು ಬೇಗ ಬಗೆಹರಿಸಬೇಕು, ಕಡು ಬಡವರಿಗೆ ಸಮರ್ಪಕ ರೀತಿಯಲ್ಲಿ ಪಡಿತರ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕೆಂದು ಅವರು ಸೂಚಿಸಿದರು.
ರೈತರ ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಅನುಸರಿಸಿದ ಧೋರಣೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಸಾಲಮನ್ನಾ ಸೌಲಭ್ಯ ಪಡೆಯಲು ವಿಳಂಬವಾಗಿದೆ. ಆದರೂ, ಜಿಲ್ಲಾಧಿಕಾರಿಗಳು ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಣಜ್ಯ ಬ್ಯಾಂಕುಗಳಿಂದ ರೈತರು ಪಡೆದ ಸಾಲವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಮಾಧ್ಯಮಗಳು ಈ ವಿಚಾರವನ್ನು ಮುಕ್ತವಾಗಿ ವಿಮರ್ಶೆ ಮಾಡಬೇಕೆಂದು ಅವರು ಮನವಿ ಮಾಡಿದರು.
ಅಲೆದಾಟ ತಪ್ಪಿಸಿ
ಜನಸಾಮಾನ್ಯರು ತಮ್ಮ ಅಹವಾಲುಗಳನ್ನು ಮುಂದಿಟ್ಟುಕೊಂಡು ತಾಲ್ಲೂಕು ಕಚೇರಿಗಳಿಗೆ ಆಗಮಿಸಿದಾಗ ಅಲ್ಲಿನ ಅಧಿಕಾರಿಗಳು ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಬಗೆಹರಿಯಲಿವೆ. ಅದೇ ರೀತಿ ಜಿಲ್ಲಾಧಿಕಾರಿಗಳು ಮತ್ತು ವಿಭಾಗೀಯ ಆಯುಕ್ತರ ಕಚೇರಿಗಳಿಗೆ ಅರ್ಜಿಗಳನ್ನು ಹಿಡಿದು ಬರುವ ಶ್ರೀ ಸಾಮಾನ್ಯನ ನೋವು-ನಲಿವುಗಳಿಗೆ ಸ್ಪಂದಿಸಬೇಕು. ಯಾವುದೇ ಕಡತಗಳನ್ನು ಶೀಘ್ರವಿಲೇವಾರಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದ ಅವರು, ಸರ್ಕಾರದ ಆಡಳಿತದಲ್ಲಿ ವಿಲೇವಾರಿಯಾಗದ ಕಡತಗಳ ಪ್ರಮಾಣ ಉಲ್ಬಣಗೊಂಡಿದೆ ಎಂಬ ಮಾಧ್ಯಮಗಳ ವರದಿಯಲ್ಲಿ ಸತ್ಯಾಂಶ ಇಲ್ಲ ಎಂದರು.
ಜಿಲ್ಲಾಧಿಕಾರಿಗಳು ಜನಸಾಮಾನ್ಯರೊಂದಿಗೆ ಬೆರೆಯಬೇಕು, ಗ್ರಾಮಪಂಚಾಯ್ತಿಗಳಿಗೆ ಭೇಟಿ ನೀಡಿದರೆ ಅಲ್ಲಿನ ಸಮಸ್ಯೆಗಳ ಸಮಗ್ರ ಚಿತ್ರಣ ದೊರೆಯಲಿದೆ. ಇಂತಹ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡು ಹಿಡಿಯಲು ಜಿಲ್ಲಾಧಿಕಾರಿಗಳು ಮುಂದಾಗಬೇಕು. ಪರಿಶಿಷ್ಟ ಜಾತಿ, ಜನಾಂಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ದಿಢೀರ್ ಭೇಟಿಕೊಟ್ಟು ಪರಿಶೀಲಿಸಬೇಕು, ಉತ್ತಮ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆಯೇ? ಇಲ್ಲವೇ? ಎಂಬುದನ್ನು ಖುದ್ದಾಗಿ ಪರಿಶೀಲಿಸಬೇಕೆಂದು ಸೂಚಿಸಿದರು.
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ 8 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಠಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಸೂಕ್ತ ಕ್ರಮಕೈಗೊಂಡಿದ್ದಾರೆ. ಕೇಂದ್ರದಿಂದ ಅಗತ್ಯ ಅನುದಾನ ಬಿಡುಗಡೆಯಾಗದಿದ್ದರೂ ರಾಜ್ಯಸರ್ಕಾರವೇ ಹಣ ಬಿಡುಗಡೆ ಮಾಡಿದೆ. ಈ ವಿಚಾರದಲ್ಲೂ ಅಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸಚಿವರು ಹಾಗೂ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು. ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಸ್ವಾಗತಿಸಿದರು.

ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಸಲುವಾಗಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಈ ತಿಂಗಳಿನಿಂದ ಆರಂಭಿಸುತ್ತಿದ್ದೇನೆ. ಪ್ರಚಾರ ಪಡೆಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಾಗಿಲ್ಲ. ಇದು ಯಾವುದೇ ಗಿಮಿಕ್ಕೂ ಅಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.
ತಮ್ಮ ಗ್ರಾಮವಾಸ್ತವ್ಯದ ಬಗ್ಗೆ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡದೆ ಸ್ಥಳೀಯ ಆಡಳಿತವನ್ನು ಚುರುಕುಗೊಳಿಸಲು ಪ್ರಯತ್ನ ಮಾಡುತ್ತೇನೆ. ಈ ಬಾರಿ ಗ್ರಾಮಸ್ಥರ ನಿವಾಸಗಳಲ್ಲಿ ಉಳಿದುಕೊಳ್ಳದೆ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದರು.
ಜನಸಾಮಾನ್ಯರು ಮತ್ತು ಸರ್ಕಾರದ ನಡುವೆ ಕಂದಕವಿರಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ತಮ್ಮೊಂದಿಗೆ ಇಡೀ ಜಿಲ್ಲಾಡಳಿತ ಹಾಜರಿದ್ದು, ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿನೂತನ ಪ್ರಯತ್ನ ಮಾಡುವುದಾಗಿಯೂ ಅವರು ಹೇಳಿದರು.

Leave a Comment