ಬಿ.ಸಿ. ಪಾಟೀಲ್ ಕೌರವನೇ ಬೇರೆ: ಇದು ಒನ್ಸ್ ಮೋರ್‌ಕೌರವ

ಬಿ.ಸಿ. ಪಾಟೀಲ್ ನಟಿಸಿದ್ದ ಕೌರವನೇ ಆಗಿದ್ದಿದ್ದರೆ ಒನ್ಸ್‌ಮೋರ್ ಕೌರವ ಚಿತ್ರದಲ್ಲಿನ ಕೌರವನನ್ನು ರೌಡಿ ಮಾಡಿರ್‍ತಿದ್ದೆ.  ಅ ಕೌರವನೇ ಬೇರೆ ಈಗಿನ ಕೌರವನ ಕಥೆಯೇ ಬೇರೆ ಎನ್ನುವ ಸ್ಪಷ್ಟಣೆ ನೀಡಿದರು ನಿರ್ದೇಶಕ ಮಹೇಂದರ್.

ಕೌರವ ಎಂದಾಕ್ಷಣಕ್ಕೆ ಬಿ.ಸಿ. ಪಾಟೀಲರು ನೆನಪಾಗುವುದರ ಜೊತೆಗೆ ೨೦೧೩ರಲ್ಲಿ ಅವರಿಗಾಗಿಯೇ ಕೌರವ-ಭಾಗ೨ ಕಥೆ ಮಾಡಿದ್ದು ಚಿತ್ರವಾಗಿ ಮುಂದುವರಿಯದೆ ಅಲ್ಲಿಗೆ ನಿಂತಿದ್ದು ಗೊಂದಲ ಸೃಷ್ಟಿಸಬಹುದೆನ್ನುವ ಕಾರಣಕ್ಕೆ ಅವರು, ಪಾಟೀಲರಿಗಾಗಿ ಮಾಡಿದ್ದ ಕಥೆ ಹಾಗೇ ಇದೆ ಬೇಕಾದರೆ ನಾಳೆಯೇ ಅದರ ಶೂಟಿಂಗ್ ಶುರು ಮಾಡಬಹುದು ಎನ್ನುವ ವಿವರಣೆಯನ್ನು ಕೊಟ್ಟರು. ಒನ್ಸ್ ಮೋರ್ ಕೌರವ ಬೇರೆಯ ಕಥೆ ಇದರಲ್ಲಿ ಹಳ್ಳಿಯ ಕಥೆಯನ್ನು ಹೊಸತನದಲ್ಲಿ ಹೇಳುವ ಪ್ರಯತ್ನವಿದೆ.

ಇದರಲ್ಲಿರುವ ಕೌರವ ಪೊಲೀಸ್ ಇನ್ಸ್‌ಪೆಕ್ಟರ್ ಅವನಿಂದ ಹಳ್ಳಿಯಲ್ಲಿ ಬದಲಾವಣೆಯಾಗುತ್ತದೆ ನವಿರಾದ ಕಥೆ ಇದೆ ಎಂದ ಅವರು, ಸಿನೆಮಾ ಗೀಳಿನಿಂದಾಗಿ ತಾವು ಪಿಯುಸಿ ಪರೀಕ್ಷೆಯಲ್ಲಿ  ಬೇಕೆಂದೇ ನಪಾಸಾಗಿ ಕೊಳ್ಳೇಗಾಲದಿಂದ ಲಾರಿ ಹತ್ತಿ ಯಾರೊಬ್ಬರ ಪರಿಚಯವಿಲ್ಲದ ಬೆಂಗಳೂರಿಗೆ ಬಂದಿದ್ದು, ಇಲ್ಲಿ ಗೆಳೆಯರು ಮತ್ತು ಜನರ ಪ್ರೋತ್ಸಾಹದಿಂದ ನಿರ್ದೇಶಕನಾಗಿ ಬೆಳೆದಿದ್ದು, ನಂತರದ ಜೀವನದಲ್ಲಿ ಎತ್ತರದ  ಮತ್ತು ಪಾತಳಕ್ಕೆ ಬಿದ್ದ ದಿನಗಳನ್ನು ಕಂಡ ತಮ್ಮ ಮೂವತ್ತು ವರ್ಷಗಳ ಸಿನೆಮಾ ಪಯಣವನ್ನು ನೆನಪಿಸಿಕೊಂಡರು.

ಆಗ ಮೈಲಿಗಲ್ಲು ಸೃಷ್ಟಿಸಿದ್ದ ಕೌರವ ಚಿತ್ರದಷ್ಟೇ ಪ್ರೋತ್ಸಾಹವನ್ನು ಈ ಕೌರವನಿಗೂ ನೀಡುವಂತೆ ಮನವಿ ಮಾಡಿದರು. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತಿರುವುದಾಗಿಯೂ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒನ್ಸ್‌ಮೋರ್ ಕೌರವನಿಗೂ ಸಂಭಾಷಣೆ ಬರೆದಿರುವ ಮಧು ಮಾತನಾಡಿ ಹಿಂದಿನ ಕೌರವ ಚಿತ್ರದ ಕಥೆಯ ಒಂದು ಎಳೆ ಇದರಲ್ಲಿಯೂ ಇದ್ದು ಚಿತ್ರ ನೋಡಿದಾಗ ಮಾತ್ರ ಗೊತ್ತಾಗುತ್ತದೆ. ಆದರೆ ಆ ಕೌರವನಿಗೂ ಒನ್ಸ್‌ಮೋರ್ ಕೌರವನಿಗೂ ಯಾವ ಲಿಂಕ್ ಕೂಡ ಇಲ್ಲ ಎಂದು ಮಹೇಂದರ್ ಚಿತ್ರಗಳಿಂದ ತಮಗೆ ಹೆಸರು ಬಂದಿದ್ದಾಗಿ ಹೇಳಿಕೊಂಡರು.  ಅವರ ಹಾಗೆ ಕೃಷ್ಣ ಕುಮಾರ್ ಒನ್ಸ್ ಮೋರ್ ಕೌರವನಿಗೂ ಛಾಯಾಗ್ರಹಣ ಮಾಡುತ್ತಿದ್ದಾರೆ.

ಹಳ್ಳಿಯ ಸೊಗಡಿನಲ್ಲಿ ಹಾಡುಗಳಿಗೆ ರಾಗ ಸಂಯೋಜಿಸಿರುವುದಾಗಿ  ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ತಿಳಿಸಿದರು. ಅಲ್ಲದೆ ಕಲ್ಯಾಣ್ ಅವರ ಸಾಹಿತ್ಯಕ್ಕೆ ಸಂಗೀತ ಮಾಡಬೇಕೆನ್ನುವ ಅವರ ಕನಸು ಈ ಚಿತ್ರದಿಂದ ನನಸಾಗಿದೆ. ಚಿತ್ರದ ಏಳೂ ಹಾಡುಗಳನ್ನೂ ತಮಗೆ ಬರೆಯಲು ಅವಕಾಶ ಕೊಟ್ಟಿದ್ದಾರೆನ್ನುವ ಸಂತಸವಿದ್ದ ಕಲ್ಯಾಣ್ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗುವ ಲಕ್ಷಣಗಳಿವೆ ಎನ್ನುವ ಭರವಸೆ ವ್ಯಕ್ತಪಡಿಸಿದರು.

ಈ ಚಿತ್ರದ ನಾಯಕ, ನಿರ್ಮಾಪಕರೂ ಆಗಿರುವ ನರೇಶ್ ಗೌಡ ಪೋಸ್ಟ್‌ರ್‌ಗಳಲ್ಲಿ ನೋಡಲು ಬಹುತೇಕ ಬಿ.ಸಿ. ಪಾಟೀಲ್ ಅವರಂತೆಯೇ ಕಾಣಿಸುತ್ತಾರೆ. ಬೇರೆ ಚಿತ್ರಗಳಿಗೆ ಫೈನಾನ್ಸ್ ಮಾಡಿ ಹಣ ಕಳೆದುಕೊಳ್ಳುತ್ತಿದ್ದ ತಾವು ಸ್ನೇಹಿತರ ಪ್ರೋತ್ಸಾಹದಿಂದಾಗಿ ಈ ಚಿತ್ರ ಮಾಡಲು ಸಾಧ್ಯವಾಗಿದೆ. ಜನ ತಮ್ಮನ್ನು ಚಿತ್ರರಂಗದಲ್ಲಿ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

Leave a Comment