ಬಿ.ಎಸ್.ವೈ ಮತ್ತೊಮ್ಮೆ ಸಿ.ಎಂ ಆಗಲೆಂದು ವಿಶೇಷ ಪೂಜೆ

ಕೆ.ಆರ್.ಪೇಟೆ. ಜು.17: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲೆಂದು ಹಾರೈಸಿ ಆಗಲೆಂದು ಅವರ ಹುಟ್ಟೂರು ತಾಲೂಕಿನ ಬೂಕನಕೆರೆ ಗ್ರಾಮದ ಗ್ರಾಮಸ್ಥರು ಗ್ರಾಮದೇವತೆ ಶ್ರೀ ಗೋಗಲಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಯಡಿಯೂರಪ್ಪ ಅವರ ಸಹೋದರಿ ಪ್ರೇಮಮ್ಮ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಗೋಗಾಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನಗಳನ್ನು ನೆರವೇರಿಸಿದರು. ಮೈಸೂರು ಮೂಲದ ವೇದ ಬ್ರಹ್ಮ ಶಶಿಧರ್ ನೇತೃತ್ವದ ಐವರ ಅರ್ಚಚರ ತಂಡದಿಂದ ಬೆಳಗ್ಗೆ 8 ಗಂಟೆಗೆ ಗ್ರಾಮದ ಗೋಗಲಮ್ಮ ದೇವಸ್ಥಾನದ ಆವರಣದಲ್ಲಿ ಪೂಜಾ ಕೈಂಕರ್ಯಗಳ ಪ್ರಾರಂಭವಾಯಿತು. ಹೋಮ ಹವನಗಳು ಸುಸೂತ್ರವಾಗಿ ನಡೆಯಲು ಗಣಪತಿ ಪೂಜೆ ಮಾಡಲಾಯಿತು. ಹೋಮ ಹವನ ನಡೆಯುವ ಜಾಗ ಮತ್ತು ಮಾಡುವವರ ದೇಹ ಶುದ್ಧಿಕರಣಕ್ಕಾಗಿ ಪುಣ್ಯಾಹ ವಾಚನ, ದೇವರ ಆಹ್ವಾನಗೆ ಕಳಸ ಸ್ಥಾಪನೆ ಮಾಡಿ ಷೋಡಸ ಉಪಚಾರ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
ಯಡಿಯೂರಪ್ಪನವರ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ಗಣಪತಿ ಹೋಮ, ಶಾಂತಿಗಾಗಿ ನವಗ್ರಹ ಹೋಮ, ಶತ್ರು ಬಾಧೆ ನಿವಾರಣೆ, ಅಧಿಕಾರ ಪ್ರಾಪ್ತಿಗಾಗಿ ಸುದರ್ಶನ ಹೋಮ, ಯಶಸ್ಸು ಮತ್ತು ವಿಜಯ ಹಾಗೂ ಲೋಕ ಕಲ್ಯಾಣಾಕ್ಕಾಗಿ ದುರ್ಗಾ ಹೋಮ ನೆರವೇರಿಸಲಾಯಿತು. ಗ್ರಾಮದ ಅದಿದೇವತೆ ಗೋಗಲಮ್ಮನಿಗೆ ಬಗೆ ಬಗೆಯ ಅಭಿಷೇಕ ಸಲ್ಲಿಸಲಾಯಿತು. ವಿಶೇಷ ಪುಷ್ಪಾಲಂಕಾರ ಮಾಡಿ ಅಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ಮಾಡಲಾಯಿತು. ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ದೇವಸ್ಥಾನಕ್ಕೆ ತಣಿರು-ತೋರಣ ಕಟ್ಟಿ ಸಿಂಗರಿಸಲಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಸಹೋದರಿ ಪ್ರೇಮಾ, ಸೋದರಳಿಯ ಸಿಂಧುಘಟ್ಟ ಅಶೋಕ್, ಸೊಸೆ ಸಂದ್ಯಾರಾಣಿ, ಶ್ರೀರಂಗಪಟ್ಟಣದ ಬಿಜೆಪಿ ಮುಖಂಡ ನಂಜುಂಡಸ್ವಾಮಿ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಬೂಕಹಳ್ಳಿ ಮಂಜು, ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿಪುಟ್ಟರಾಜು, ಬಿಜೆಪಿ ಉಪಾಧ್ಯಕ್ಷ ಶೀಳನೆರೆ ಭರತ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರ್ವಮಂಗಳವೆಂಕಟೇಶ್, ಬಿಜೆಪಿ ತಾಲೂಕು ಕಾರ್ಯದರ್ಶಿ ಯತೀಶ್, ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ತಾಲೂಕು ಅಧ್ಯಕ್ಷ ಮಧುಸೂಧನ್, ಮುಖಂಡರಾದ ಬಿ.ಎನ್.ಪುಟ್ಟರಾಜು, ವಿನಯ್‍ಕುಮಾರ್, ಗಂಗಾಧರ್, ಹೆಳವೇಗೌಡ, ಲಕ್ಷ್ಮೀಕಾಂತ್ ಸೇರಿದಂತೆ ನೂರಾರು ಗ್ರಾಮಸ್ಥರು ಮತ್ತು ಅಭಿಮಾನಿಗಳು ಬೂಕನಕೆರೆಯ ಮಣ್ಣಿನ ಮಗ ಮತ್ತೊಮ್ಮೆ ಸಿಎಂ ಆಗಲಿ ಎಂದು ಗ್ರಾಮಸ್ಥರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿ ಪೂಜೆ ಮುಗಿಸಿಕೊಂಡು ಗವಿಮಠದಲ್ಲಿರುವ ಯಡಿಯೂರಪ್ಪನವರ ಕುಟುಂಬದ ಮನೆ ದೇವರಾದ ಸ್ವತಂತ್ರ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆಯನ್ನು ಅವರ ಸಹೋದರಿ ಪ್ರೇಮ ಕುಟುಂಬ ನೆರವೇರಿಸಿ ಯಡಿಯೂರಪ್ಪನಿಗೆ ಅಧಿಕಾರ ಪ್ರಾಪ್ತಿಗೆ ಮನೆ ದೇವರಿಗೆ ಮೊರೆ ಇಟ್ಟರು.
ಶ್ರೀರಂಗಪಟ್ಟಣದ ಬಿಜೆಪಿ ಮುಖಂಡ ನಂಜುಂಡಸ್ವಾಮಿ ಮಾತನಾಡಿ ರಾಜ್ಯದ ಸಂಪನ್ಮೂಲವನ್ನು ಲೂಟಿ ಮಾಡುತ್ತಿರುವ ಮೈತ್ರಿ ಸರಕಾರ ವಿಶ್ವಾಸ ಮತಯಾಚನೆ ವೇಳೆ ಪತನವಾಗಲಿದೆ. ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಅದಕ್ಕಾಗಿ ಅವರ ಕುಟುಂಬ ಎಲ್ಲಾ ಕಾರ್ಯವೂ ನಿರ್ವಿಘ್ನವಾಗಿ ನಡೆಯಲೆಂದು ಪೂಜೆ ನಡೆಸುತ್ತಿದ್ದಾರೆ. ಇದು ಜಿಲ್ಲೆಯ ಹೆಮ್ಮೆ ಪಡಬೇಕಾದ ವಿಚಾರ. ಜಿಲ್ಲೆಯ ಮಣ್ಣಿನ ಮಗ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಯಡಿಯೂರಪ್ಪ ಅವರ ಸಹೋದರಿ ಪ್ರೇಮಾ ಮಾತನಾಡಿ, ಯಡಿಯೂರಪ್ಪರಿಗೆ ಅಧಿಕಾರ ಪ್ರಾಪ್ತಿ ಆಗಬೇಕಾದರೇ ಇಲ್ಲಿನ ಗೋಗಲಮ್ಮ ಮತ್ತು ಗವಿಮಠದ ಮನೆ ದೇವರಾದ ಸ್ವತಂತ್ರ ಸಿದ್ಧಲಿಂಗಸ್ವಾಮಿ ದೇವರ ಅನುಗ್ರಹ ಬೇಕು. ಅದಕ್ಕೆ ಮತ್ತು ರಾಜ್ಯದ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಪುನಸ್ಕಾರಗಳು ಮತ್ತು ಹೋಮ ಹವನಗಳನ್ನ ನೆರವೇರಿಸಲಾಗುತ್ತಿದೆ. ಇಲ್ಲಿ ಯಡಿಯೂರಪ್ಪ ಸಿಎಂ ಆದರೆ, ಕೇಂದ್ರದಲ್ಲಿ ಮೋದಿ ಇರುತ್ತಾರೆ. ರಾಜ್ಯದಲ್ಲಿ ಕಲ್ಯಾಣವಾಗಲಿದೆ ಎಂದು ಹೇಳಿದರು.

Leave a Comment