ಬಿ.ಆರ್.ಶೆಟ್ಟಿ ಫೌಂಡೇಷನ್ ಆರಂಭ

ಮಂಗಳೂರು, ಆ.೧- ದಕ್ಷಿಣ ಕನ್ನಡ ಮೂಲದ ಉದ್ಯಮಿ ಹಾಗೂ ದಾನಿಗಳಾದ ಡಾ. ಬಿ.ಆರ್. ಶೆಟ್ಟಿ ಹಾಗೂ ಡಾ. ಸಿ.ಆರ್. ಶೆಟ್ಟಿ ಹೊಸದಾಗಿ ಡಾ. ಬಿಆರ್ ಅಂಡ್ ಸಿಆರ್ ಶೆಟ್ಟಿ ಫೌಂಡೇಷನ್ ಸ್ಥಾಪನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಪ್ರತಿಷ್ಠಾನ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆ ಹಾಗೂ ಸಮುದಾಯ ಸಬಲೀಕರಣ ಮುಂತಾದ ಕ್ಷೇತ್ರಗಳ ಮೇಲೆ ಗಮನ ಹರಿಸಲಿದೆ. ಈ ಸ್ವಯಂಸೇವಾ ಸಂಸ್ಥೆಯ ಘೋಷಣೆಯ ಜತೆ ಜತೆಗೆ ಅಕ್ಷಯ ಪಾತ್ರ ಫೌಂಡೇಷನ್, ವಾಕ್ಹಾರ್ಟ್ ಫೌಂಡೇಷನ್, ಇಷಾ ವಿದ್ಯಾ, ಸೆಲ್ಕೊ ಫೌಂಡೇಷನ್, ಮೆಂಟ್ರಿಕ್ ತರಬೇತಿ ಕನ್ಸಲ್ಟಿಂಗ್ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿಗಳ ಜತೆ ಒಡಂಬಡಿಕೆ ಪತ್ರಕ್ಕೂ ಸಹಿ ಮಾಡಲಾಗಿದೆ. ಇವುಗಳ ಜತೆ ಸೇರಿ ವಿವಿಧ ಸಾಮಾಜಿಕ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅಧ್ಯಕ್ಷ ಬಿ.ಆರ್.ಶೆಟ್ಟಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಮಾಜದಿಂದ ನಾವು ಸಾಕಷ್ಟು ಪಡೆದಿದ್ದು, ಸಮಾಜಕ್ಕೂ ಒಂದಿಷ್ಟು ಹಿಂತಿರುಗಿಸಬೇಕೆಂಬ ದೃಷ್ಟಿಯಿಂದ ಪ್ರತಿಷ್ಠಾನ ಆರಂಭಿಸಲಾಗಿದೆ. ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸಬೇಕೆಂಬ ನನ್ನ ಹಂಬಲ, ಸದಾಶಯಕ್ಕೆ ಫೌಂಡೇಷನ್ ಅತ್ಯಂತ ಸಹಕಾರಿಯಾಗಿ ಲಭಿಸಿದೆ ಎಂದು ಅವರು ಹೇಳಿದರು. ಶ್ರೀಮಂತರು ತಮ್ಮ ಅರ್ಧದಷ್ಟು ಸಂಪತ್ತನ್ನು ದತ್ತಿ ಕಾರ್ಯಗಳಿಗೆ ನೀಡುವ ಗಿವಿಂಗ್ ಪ್ಲೆಡ್ಜ್‌ಗೆ ಡಾ. ಬಿಆರ್ ಹಾಗೂ ಸಿಆರ್ ಶೆಟ್ಟಿ ಇತ್ತೀಚೆಗೆ ಸಹಿ ಮಾಡಿದ್ದರು.

Leave a Comment