ಬಿಹಾರದಲ್ಲಿ ಮಿದುಳಿನ ಉರಿಯೂತ ಉಪಶಮನಕ್ಕೆ ಸರ್ವಪ್ರಯತ್ನ: ಡಾ ಹರ್ಷವರ್ಧನ್

ನವದೆಹಲಿ, ಜೂ 18 – ಬಿಹಾರದಲ್ಲಿ ಉಲ್ಬಣಿಸಿರುವ ಮಿದುಳಿನ ಉರಿಯೂತಕ್ಕೆ 120 ಮಕ್ಕಳು ಬಲಿಯಾಗಿರುವ ಸುದ್ದಿಯ ಬೆನ್ನಲ್ಲೇ, “ಮಿದುಳಿನ ಉರಿಯೂತ ಉಪಶಮನಕ್ಕೆ ಸರ್ಕಾರ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಹರ್ಷವರ್ಧನ್ ಹೇಳಿದ್ದಾರೆ.

  ಸಂಸತ್ ಭವನದ ಎದುರು ಸುದ್ದಿಗಾರರೊಡನೆ ಮಾತನಾಡಿದ ಅವರು, ಮಕ್ಕಳ ಸಾವಿನ ಸಂಖ್ಯೆಯ ಏರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, “ಸರ್ಕಾರ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದೆ.  ಮುಜಾಫರ್ ಪುರದಲ್ಲಿ ಮಕ್ಕಳ ತುರ್ತುಚಿಕಿತ್ಸೆಗಾಗಿಯೇ ಅತ್ಯಾಧುನಿಕ ಪ್ರತ್ಯೇಕ ಘಟಕ ನಿರ್ಮಾಣವಾಗುತ್ತಿದೆ.  ಈಗಾಗಲೇ ಈ ಎಲ್ಲ ವಿಷಯಗಳನ್ನೂ ಮಾಧ್ಯಮಗಳ ಜೊತೆ ಹಂಚಿಕೊಳ್ಳಲಾಗಿದೆ” ಎಂದು ತಿಳಿಸಿದರು.

  ದಿನೇದಿನೆ ಸಾವಿನ ಸಂಖ್ಯೆ ಏರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ಗಂಟೆಗೊಮ್ಮೆ ಸನ್ನಿವೇಶದ ಕುರಿತು ಪರಾಮರ್ಶೆ ನಡೆಸಲಾಗುತ್ತಿದೆ” ಎಂದರು.

  “ಪರಿಸರ, ಹವಾಮಾನ ವೈಪರಿತ್ಯವೂ ಸೇರಿದಂತೆ ಕಾಯಿಲೆಯ ಕಾರಣವನ್ನು ಅಧ್ಯಯನ ಮಾಡಲು ಉತ್ತಮ ಗುಣಮಟ್ಟದ ಆಂತರಿಕ ಸಂಶೋಧನಾ ತಂಡದ ತುರ್ತು ಅಗತ್ಯವಿದೆ.  ಹೀಗಾಗಿ ಉನ್ನತ ಮಟ್ಟದ ಆಂತರಿಕ ಸಮಿತಿಯನ್ನು ಸದ್ಯದಲ್ಲೇ ಬಿಹಾರಕ್ಕೆ ಕಳುಹಿಸಲಾಗುವುದು.  ಸೋಂಕಿನಿಂದ ಬಳಲುತ್ತಿರುವ ಮಕ್ಕಳನ್ನು ತಂಡ ಅಭ್ಯಸಿಸಲಿದೆ” ಎಂದ ಅವರು, ಸದ್ಯದಲ್ಲೇ ಮುಜಾಫರ್ ಪುರದಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು” ಎಂದು ಡಾ ಹರ್ಷವರ್ಧನ್ ಮಾಹಿತಿ ನೀಡಿದರು.

  ಬೆಂಗಳೂರಿನ ನಿಮ್ಹಾನ್ಸ್, ದೆಹಲಿಯ ಐಸಿಎಂ ಅರ್, ಏಮ್ಸ್, ಹೈದರಾಬಾದ್ ನ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ, ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್, ಪುಣೆಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐವಿ), ಪುಣೆಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ(ಎನ್ಐಇ)ಯ ತಜ್ಞರನ್ನು ಆಂತರಿಕ ಶಿಸ್ತು ಸಮಿತಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.

Leave a Comment