ಬಿಸಿಲ ಬೇಗೆಗೆ ವ್ಯಾಪಕ ಕೃಷಿ ನಾಶ : ರೈತರು ಕಂಗಾಲು

ಕಾಸರಗೋಡು, ಮೇ ೧೬- ದಿನದಿಂದ ದಿನಕ್ಕೆ ಬಿಸಿಲ ಬೇಗೆ ಗರಿಷ್ಠ ಮಟ್ಟಕ್ಕೇರುತ್ತಿದ್ದು ಜಲಾಶಯಗಳು ಬತ್ತಿ ಬರಡಾಗುತ್ತಿವೆ. ಈ ಕಾರಣದಿಂದ ವಾಣಿಜ್ಯ ಬೆಳೆ ಕಂಗು, ತೆಂಗು ಸಹಿತ ಕೃಷಿ ವ್ಯಾಪಕ ನಾಶ ಸಂಭವಿಸಿದ್ದು, ಕೃಷಿಕರನ್ನು ಆತಂಕಕ್ಕೀಡುಮಾಡಿದೆ.
ಸಾಮಾನ್ಯವಾಗಿ ಮೇ ತಿಂಗಳಲ್ಲಿ ಸುರಿಯ ಬೇಕಾದ ಬೇಸಗೆ ಮಳೆ ಸುರಿಯದಿರುವುದರಿಂದ ಇನ್ನಷ್ಟು ಸಮಸ್ಯೆಗೆ ತುತ್ತಾಗುವಂತಾಗಿದೆ. ಕೃಷಿ ತೋಟಕ್ಕೆ ನೀರುಣಿಸಲು ಸಾಧ್ಯವಾಗದೆ ಕಂಗು, ತೆಂಗು ಮೊದಲಾದ ಕೃಷಿಗೆ ಅಪಾರ ನಷ್ಟ ಸಂಭವಿಸಿದೆ.
ಬಿಸಿಲ ಬೇಗೆಯಿಂದ ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕ ಹೊಳೆ, ತೋಡು, ಕೆರೆ, ಬಾವಿ ಸಹಿತ ಜಲಮೂಲಗಳೆಲ್ಲ ಬತ್ತಿ ಹೋಗಿವೆ. ಇದರ ಪರಿಣಾಮವಾಗಿ ಕೃಷಿ ಕ್ಷೇತ್ರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತೆಂಗು, ಬಾಳೆ, ಕಾಳು ಮೆಣಸು, ತರಕಾರಿ ಕೃಷಿ ವ್ಯಾಪಕ ನಾಶವಾಗಿದೆ. ಜಿಲ್ಲೆಯಲ್ಲಿ ೧.೨ ಹೆಕ್ಟೇರ್ ಪ್ರದೇಶದಲ್ಲಿ ಕಂಗು, ೭.೬ ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ, ೨.೬ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಕೃಷಿ ಸಂಪೂರ್ಣವಾಗಿ ನಾಶಗೊಂಡಿದೆ. ಇದೇ ವೇಳೆ ೭೨ ತೆಂಗಿನ ಮರಗಳೂ ಒಣಗಿ ನಾಶಗೊಂಡಿವೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ಕಳೆದ ಮಳೆಗಾಲದಲ್ಲಿ ಅಡಿಕೆ ಕೃಷಿಗೆ ಬಾಧಿಸಿದ ಮಹಾಳಿ ರೋಗದಿಂದ ಬಹುತೇಕ ಫಸಲು ನಾಶಗೊಂಡಿದೆ. ಆದರಿಂದುಂಟಾದ ನಷ್ಟವನ್ನು ಹೇಗೆ ಭರ್ತಿಗೊಳಿಸುವುದೆಂದು ತಿಳಿಯದೆ ಕೃಷಿಕರು ಕಂಗಾಲಾಗಿದ್ದಾರೆ. ಇದೀಗ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಳ್ಳೇರಿಯ, ಪೆರಡಾಲ, ಗೋಸಾಡ, ಅಡೂರು, ದೇಲಂಪಾಡಿ, ಕಾಟುಕುಕ್ಕೆ, ಬೆಳ್ಳೂರು ಮೊದಲಾದೆಡೆಗಳಲ್ಲಿ ಅಡಿಕೆ ಕೃಷಿಗೆ ನೀರುಣಿಸಲು ಸಾಧ್ಯವಾಗದೆ ನಾಶದಂಚಿಗೆ ಸರಿದಿದೆ. ಈ ಪ್ರದೇಶಗಳಲ್ಲಿ ಬಹುತೇಕ ಕೃಷಿಕರು ಕೊಳವೆ ಬಾವಿಗಳಿಂದ ನೀರೆತ್ತಿ ಕೃಷಿಗೆ ಬಳಸುತ್ತಿದ್ದರು.
ಬಿಸಿಲ ಬೇಗೆಗೆ ಕೊಳವೆ ಬಾವಿಗಳಲ್ಲಿ ನೀರು ಬತ್ತತೊಡಗಿವೆ. ಬಾವಿ, ತೋಡುಗಳಲ್ಲೂ ನೀರು ಬತ್ತಿದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಈಗಾಗಲೇ ೨ರಿಂದ ೩ ಮೀಟರ್ ಆಳಕ್ಕೆ ನೀರಿನ ಮಟ್ಟ ಕುಸಿದಿದೆ. ಈ ಕಾರಣದಿಂದ ಕಂಗಿನ ಮರಗಳಿಗೆ ಸ್ಪಿಂಕ್ಲರ್‌ಗಳ ಮೂಲಕ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಎರಡೋ ಮೂರೋ ದಿನಗಳ ಅಂತರದಲ್ಲಿ ಪೈಪ್‌ಗ್ಳ ಮೂಲಕ ಕಂಗಿನ ಮರಗಳ ಬುಡಕ್ಕೆ ನೀರು ಹಾಯಿಸಲು ಸಾಧ್ಯವಾಗುತ್ತದೆ. ಇನ್ನೂ ಕೆಲವು ದಿನಗಳ ವರೆಗೆ ಮಳೆ ಸುರಿಯದಿದ್ದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ.
ಫಸಲು ಬಿಡುವ ಸಮಯ ಇದಾಗಿದೆ. ಈ ವೇಳೆ ಅಡಿಕೆ ಮರಗಳ ಬುಡದಲ್ಲಿ ಧಾರಾಳ ನೀರಿನಂಶ ಇರಬೇಕು. ಆದರೆ ಇದೀಗ ಅಡಿಕೆ ಮರದ ಬುಡದಲ್ಲಿ ನೀರಿಲ್ಲದೆ, ಗರಿಗಳು ಒಣಗುತ್ತಿವೆ. ನೀರಿನ ಸಮಸ್ಯೆಯಿಂದಾಗಿ ತೆಂಗು, ಕಂಗು ಕೃಷಿಯ ಜತೆಯಲ್ಲಿ ಕಾಳು ಮೆಣಸು ಕೂಡ ಒಣಗುತ್ತಿದೆ. ಬಿಸಿಲ ಬೇಗೆಗೆ ಕೃಷಿ ನಾಶವಾದರೆ ಕೃಷಿಕರಿಗೆ ನಷ್ಟ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಅಂತಹ ವ್ಯವಸ್ಥೆಯಿಲ್ಲ. ಬಿಸಿಲ ಬೇಗೆಗೆ ಕೃಷಿ ನಾಶಕ್ಕೆ ನಷ್ಟ ಪರಿಹಾರ ಲಭಿಸಬೇಕಿದ್ದಲ್ಲಿ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವಾಗಿ ಘೋಷಿಸಬೇಕು. ಆದರೆ ಈ ಕುರಿತು ಸರಕಾರ ಈ ವರೆಗೂ ಯಾವುದೇ ಚಿಂತನೆಯನ್ನು ನಡೆಸಿಲ್ಲ.

Leave a Comment