ಬಿಸಿಲಿನ ಧಗೆಗೆ ಜನ ನಿತ್ರಾಣ : ಗುಲ್ಬರ್ಗಾದಲ್ಲಿ 1 ಸಾವು, ರಾಯಚೂರು ಮಕ್ಕಳು ಸುಸ್ತು

 

ಬೆಂಗಳೂರು/ ರಾಯಚೂರು, ಏ. ೨೦- ಉತ್ತರ ಕರ್ನಾಟಕ ಅದರಲ್ಲೂ ಕಲಬುರಗಿ, ರಾಯಚೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಕಾದು ಕಾವಲಿಯಂತಾಗಿರುವ ಬಿಸಿಲಿನ ಧಗೆಗೆ ಕಲಬುರಗಿಯಲ್ಲಿ ಯುವತಿ ಮೃತಪಟ್ಟಿದ್ದು, ರಾಯಚೂರಿನಲ್ಲಿ 18ಕ್ಕೂ ಹೆಚ್ಚು ನವಜಾತ ಶಿಶುಗಳು ನಿರ್ಜಲೀಕರಣ ಸಮಸ್ಯೆಯಿಂದ ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

* ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಝಳಕ್ಕೆ ಜನ ತತ್ತರ

* ಕಲಬುರಗಿಯಲ್ಲಿ ಯುವತಿ ಸಾವು

* ರಾಯಚೂರಿನಲ್ಲಿ 18 ನವಜಾತ ಶಿಶುಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

* 48ಕ್ಕೂ ಅಧಿಕ ಶಿಶುಗಳಿಗೆ ಕಿಡ್ನಿ ಸಮಸ್ಯೆ

* ನಿರ್ಜಲೀಕರಣ ಸೇರಿ ವಿವಿಧ ಆರೋಗ್ಯ ಸಮಸ್ಯೆ

* ಮುಂಗಾರು ಆರಂಭವಾಗದಿದ್ದರೆ ಮತ್ತಷ್ಟು ಸಮಸ್ಯೆ ಖಚಿತ

ಕಲಬುರಗಿ- 43.6

ರಾಯಚೂರು- 42.5

ಬಳ್ಳಾರಿ- 42

ಬೆಳಗಾವಿ- 39.3

ಬಾಗಲಕೋಟೆ- 30.8

ಧಾರವಾಡ- 39.4

ಗದಗ- 39.8

ಹಾವೇರಿ- 38

ಚಿತ್ರದುರ್ಗ- 39.1

ದಾವಣಗೆರೆ- 39

ಬೆಂಗಳೂರು- 35 ಸೆಲ್ಸಿಯಸ್ ಉಷ್ಣಾಂಶ ದಾಖಲು

ಕೆಂಡ ಕಾರುವ ಸೂರ್ಯನ ತಾಪಮಾನಕ್ಕೆ ರಾಜ್ಯಾದ್ಯಂತ ಜನರು ಬಸವಳಿದಿದ್ದು, ನವಜಾತ ಶಿಶುಗಳು ಕಿಡ್ನಿ ವೈಫಲ್ಯ ಸೇರಿದಂತೆ ಮಾರಣಾಂತಿಕ ರೋಗಕ್ಕೆ ಬಲಿಯಾಗುವಂತಹ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ. ರಾಯಚೂರು ಹಾಗೂ ಗುಲ್ಬರ್ಗಾದಲ್ಲಿ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿರುವುದು ಜನರನ್ನು ಕಂಗೆ‌ಡಿಸುವಂತೆ ಮಾಡಿದೆ.

ರಾಯಚೂರಿನಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ಕೇಂದ್ರಗಳ ಸ್ಥಾಪನೆಯಿಂದಾಗಿ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರಿಂದಾಗಿ ತೀವ್ರ ತಾಪಮಾನ ಹೆಚ್ಚಾಗಿದ್ದು, ನಿರ್ಜಲೀಕಣ ಮತ್ತು ಕಿಡ್ನಿ ಸಮಸ್ಯೆಯಿಂದ ಮಕ್ಕಳು ಬಳಲುವಂತಾಗಿದೆ.

ಕಲ್ಬುರ್ಗಿಯ ಚಿತ್ತಾಪುರ ತಾಲೂಕಿನ ಚಿಕ್ಕುಂಡಿಯಲ್ಲಿ ಲೀಲಾ ಬಾಯಿ ಜಾದವ್ (19) ಎಂಬ ಯುವತಿ ಸೌದೆ ತರಲು ಹೊರಗೆ ಹೋಗಿದ್ದಾಗ ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಕೆಯನ್ನು ಕೂಡಲೇ ಕಲಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸುವ ವೇಳೆಗೆ ಆಕೆ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಯುವತಿಯ ಸಾವಿಗೆ ಬಿಸಿಲಿನ ತಾಪವೇ ಕಾರಣ ಎಂದು ವೈದ್ಯರು ತಿಳಿಸಿದ್ದು, ಲೀಲಾಬಾಯಿಯ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡದೆ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಕಳೆದ 5 ದಿನಗಳ ಹಿಂದೆ 13 ವರ್ಷದ ಬಾಲಕ ಸಾವನ್ನಪ್ಪಿದ್ದ. ಇದೀಗ ಮತ್ತೊಬ್ಬ ಯುವತಿ ಬಿಸಿಲಿನ ಪ್ರಖರತೆಗೆ ಬಲಿಯಾಗುವಂತಾಗಿದೆ.

ರಾಯಚೂರಿನಲ್ಲಿ 18 ಮಕ್ಕಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ 48ಕ್ಕೂ ಅಧಿಕ ನವಜಾತ ಶಿಶುಗಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ.

ತಿಂಗಳಾಂತ್ಯದವರೆಗೂ ಬಿಸಿಲಿನ ತಾಪಮಾನ ಹೀಗೆ ಮುಂದುವರೆದರೆ ನವಜಾತ ಶಿಶುಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಶಿಶುಗಳನ್ನು ರಕ್ಷಿಸಲು ಅಗತ್ಯ ಸೌಲಭ್ಯಗಳ ಕೊರತೆಯಿಂದ ಪಾರು ಮಾಡಲು ಸರ್ಕಾರ ಮುಂದಾಗಬೇಕು ಎಂದು ಮಕ್ಕಳ ತಜ್ಞ ಡಾ. ಶಿವಪ್ಪ ಮಾಲೀ ಪಾಟೀಲ್ ಹೇಳಿದ್ದಾರೆ.

ಕಲಬುರಗಿಯಲ್ಲಿ 43.6, ರಾಯಚೂರಿನಲ್ಲಿ 42.5, ಬಳ್ಳಾರಿಯಲ್ಲಿ 42, ಬೆಳಗಾವಿಯಲ್ಲಿ 39.3, ಬಾಗಲಕೋಟೆಯಲ್ಲಿ 30.8, ಧಾರವಾಡದಲ್ಲಿ 39.4, ಗದಗದಲ್ಲಿ 39.8, ಹಾವೇರಿಯಲ್ಲಿ 38, ಚಿತ್ರದುರ್ಗದಲ್ಲಿ 39.1, ದಾವಣಗೆರೆಯಲ್ಲಿ 39, ಬೆಂಗಳೂರಿನಲ್ಲಿ 35 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಜನರನ್ನು ಬಸವಳಿಯುವಂತೆ ಮಾ‌ಡಿದೆ.

ಮುಂಗಾರು ಆರಂಭವಾಗದಿದ್ದರೆ ಜೂನ್, ಜುಲೈ ವರೆಗೂ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗಲಿದ್ದು, ಇದರಿಂದ ಮಕ್ಕಳು, ವಯೋವೃದ್ಧರು ಸೇರಿದಂತೆ ಜನರು ಸಮಸ್ಯೆಗೆ ಸಿಲುಕುವಂತಾಗಲಿದೆ.

 

 

Leave a Comment