ಬಿಲ್ಲುಗಾರಿಕೆಯಲ್ಲಿ ಭಾರತದ ಮಹಿಳಾ ತಂಡಕ್ಕೆ ಬೆಳ್ಳಿ

ಜಕಾರ್ತಾ, ಆ ೨೮- ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಕಾಂಪೌಂಡ್ ಟೀಮ್ ಬಿಲ್ಲುಗಾರಿಕಾ ಸ್ಪರ್ಧೆಯಲ್ಲಿ ಭಾರತೀಯ ತಂಡ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದೆ.

ಸೌತ್ ಕೊರಿಯಾ ವಿರುದ್ಧ ನಡೆದ ಅಂತಿಮ ಹಣಾಹಣಿಯ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರ ಕಾಂಪೌಂಡ್ ತಂಡ ದಕ್ಷಿಣ ಕೊರಿಯದೆದುರು ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು.

ಮುಸ್ಕಾನ್ ಕಿರಾರ್, ಮಧುಮಿತಾ ಕುಮಾರಿ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರನ್ನು ಒಳಗೊಂಡ ಭಾರತೀಯ ವನಿತಾ ತಂಡ ದಕ್ಷಿಣ ಕೊರಿಯದೆದುರು ೨೨೮-೩೩೧ ಅಂತರದಲ್ಲಿ ಪರಾಭವಗೊಂಡಿತು.
ಮೊದಲ ಸೆಟ್‌ನಲ್ಲಿ ೫೯-೫೭ರಲ್ಲಿ ಮುಂದಿದ್ದ ಭಾರತೀಯ ವನಿತೆಯರು ಎರಡನೇ ಸೆಟ್‌ನಲ್ಲಿ ೫೮-೫೬ರ ಅಂತರದಲ್ಲಿ ಪರಾಭವಗೊಂಡರು. ಮೂರನೇ ನಿರ್ಣಾಯಕ ಸೆಟ್ನಲ್ಲಿ ಉಭಯ ತಂಡಗಳ ನಡುವೆ ೫೮ ಅಂಕಗಳ ಸಮಬಲ ಏರ್ಪಟ್ಟಿತು. ಆದರೆ ಅಂತಿಮವಾಗಿ ಭಾರತೀಯ ವನಿತೆಯರು ೫೫-೫೮ರ ಅಂತರದಲ್ಲಿ ಪರಾಭವಗೊಂಡರು.

ಭಾರತೀಯ ಪುರುಷ ಕಾಂಪೌಂಡ್ ತಂಡ ಕೂಡ ಬಿಲ್ಲುಗಾರಿಕೆಯ ಫೈನಲ್‌ನಲ್ಲಿ ದಕ್ಷಿಣ ಕೊರಿಯವನ್ನು ಎದುರಿಸಿದೆ.

ಮಧುಮಿತಾ ಕುಮಾರಿಗೆ ೧೦ ಲಕ್ಷ ರೂ ಬಹುಮಾನ
ಇಂದು ನಡೆದ ಮಹಿಳೆಯರ ಕಾಂಪೌಂಡ್ ಟೀಮ್ ಬಿಲ್ಲುಗಾರಿಕಾ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಭಾರತೀಯ ವನಿತೆಯರ ತಂಡದ ಮಧುಮಿತಾ ಕುಮಾರಿಗೆ ಜಾರ್ಖಾಂಡನ ಮುಖ್ಯಮಂತ್ರಿ ರಘುಬರ್ ದಾಸ್ ೧೦ ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ. ಅಲ್ಲದೇ ರಾಜ್ಯದ ಯುವಜನತೆಗೆ ಮಧುಮಿತಾ ಸ್ಪೂರ್ತಿದಾಯಕ ಕ್ರೀಡಾಪಟು ಆಗಿದ್ದಾರೆ ಎಂದು ಹೊಗಳಿ ಕೊಂಡಾಡಿದ್ದಾರೆ.

Leave a Comment