ಬಿಲಿಯರ್ಡ್ಸ್ ಚುನಾವಣೆಗೆ ದುಮುಕಿದ ಪಂಕಜ್

ಬೆಂಗಳೂರು, ಆ. ೧೭- ಪ್ರಸಕ್ತ ಸಾಲಿನ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯ (ಕೆಎಸ್‌ಬಿಎ) ಚುನಾವಣೆಯಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರವನ್ನು ಬಿಲಿಯರ್ಡ್ಸ್ ಆಟಗಾರ ಪದ್ಮಶ್ರೀ ಪಂಕಜ್ ಅಡ್ವಾಣಿ ಅವರು ಪ್ರಕಟಿಸಿದ್ದಾರೆ.

ಬಿಲಿಯರ್ಡ್ಸ್ ಸಂಸ್ಥೆಯ ಆಡಳಿತ ಹದಗೆಟ್ಟಿದೆ. ಸಂಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಆಗಬೇಕಾಗಿದೆ. ಯುವ ಆಟಗಾರರಿಗೆ ಅಗತ್ಯ ಪ್ರೋತ್ಸಾಹ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕ್ರೀಡಾಬದುಕಿಗೆ ನಿವೃತ್ತಿಯನ್ನು ಘೋಷಿಸಿಲ್ಲ. ಇದರಿಂದ ಸಂಘರ್ಷ ಎದುರಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಪಂಕಜ್ ಅಡ್ವಾಣಿ, ಅನೇಕ ಆಟಗಾರರು ನಿವೃತ್ತಿಯನ್ನು ಘೋಷಿಸದೆ ಸಂಸ್ಥೆಯ ಆಡಳಿತದಲ್ಲಿ ಭಾಗಿಯಾಗಿದ್ದರು.

ನಾನು ಆಡಳಿತಾತ್ಮಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ. ಕ್ರೀಡೆಯ ಬೆಳವಣಿಗೆಗಷ್ಟೇ ಗಮನಹರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ನನ್ನ ಗುರು ಅರವಿಂದ್ ಸವೂರ್ ಅವರು ಅಧ್ಯಕ್ಷ ಮತ್ತು ಎಸ್. ಜೈರಾಜ್ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ನಾನೂ ಕೂಡ ಅವರೊಂದಿಗೆ ಕೈಜೋಡಿಸಿದರೆ ಬಿಲಿಯರ್ಡ್ಸ್ ಕ್ರೀಡೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು 19 ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಪಂಕಜ್ ಅಡ್ವಾಣಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಲಿಯರ್ಡ್ಸ್ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದೆ. ಬುದ್ಧಿವಂತರ ಕ್ರೀಡೆ ಎಂದೇ ಹೆಸರಾದ ಸ್ನೂಕರ್‌ನ್ನು ಸರ್ಕಾರ ಆದ್ಯತೆಯ ಕ್ರೀಡಾಪಟ್ಟಿಯಲ್ಲಿ ಸೇರಿಸಬೇಕು ಎಂದು ಅವರು ಆಗ್ರಹಪಡಿಸಿದರು.

ಸಂಸ್ಥೆಯ ಆಡಳಿತವನ್ನು ಮತ್ತಷ್ಟು ಬಲಪಡಿಸಿ ಯವಕರಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಕ್ರಮಕೈಗೊಳ್ಳಬೇಕಿದೆ. ಕ್ರೀಡೆಯ ಬಗ್ಗೆ ಅಪಾರ ಒಲವು ಮೂಡಿಸಬೇಕಿದೆ ಎಂದು ಅವರು ಹೇಳಿದರು.

ಹಿರಿಯ ಆಟಗಾರ ಅರವಿಂದ ಸವೂರ್ ಮಾತನಾಡಿ, ರಾಜ್ಯದಲ್ಲಿ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಕ್ರೀಡೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಸೂಕ್ತ ಪ್ರೋತ್ಸಾಹ ಸಿಗದೆ ಸಾಕಷ್ಟು ಯುವಕರು ಕ್ರೀಡೆಯಿಂದ ವಿಮುಖರಾಗಿದ್ದಾರೆ ಎಂದು ಹೇಳಿದರು.

Leave a Comment