ಬಿರುಗಾಳಿ ಮಳೆಗೆ ನೂರಾರು ಎಕರೆ ಬಾಳೆ ಬೆಳೆ ನಷ್ಟ

ಹನೂರು: ಏ.7- ನಿನ್ನೆ ಸಂಜೆ ಸುರಿದ ಅಲ್ಪ ಪ್ರಮಾಣದ ಮಳೆ ಜೊತೆಗೆ ಭಾರಿ ರಭಸವಾಗಿ ಬೀಸಿದ ಬಿರುಗಾಳಿಗೆ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ನಷ್ಟ ಉಂಟಾಗಿರುವ ಘಟನೆ ಹನೂರು ತಾಲ್ಲೂಕಿನ ಮಿಣ್ಯಂ ಗ್ರಾಮದ ರೈತರ ಜಮಿನುಗಳಲ್ಲಿ ನಡೆದಿದೆ.
ಮಿಣ್ಯಂ ಗ್ರಾಮದ ನಿವಾಸಿಗಳಾದ ಬೆಟ್ಟದಯ್ಯ ಜಮೀನಿನಲ್ಲಿ ಬೆಳೆಯಲಾಗಿದ್ದ 3 ಸಾವಿರ ಬಾಳೆ, ಮಧುರ ಜಮೀನಿನಲ್ಲಿ ಬೆಳೆಯಲಾಗಿದ್ದ 2 ಸಾವಿರ ಬಾಳೆ, ಮಾದೇಗೌಡ ಜಮೀನಿನಲ್ಲಿ 2600 ಬಾಳೆ, ಕಾಳಮ್ಮ ಜಮೀನಿನಲ್ಲಿ 1 ಸಾವಿರ ಬಾಳೆ, ದೇವರವರ ಜಮೀನಿನಲ್ಲಿ 1500 ಬಾಳೆ, ಗಾಜನೂರು ಗ್ರಾಮದ ನಿವಾಸಿಯಾದ ದೊಡ್ಡಮ್ಮ ಬೊಮ್ಮೇಗೌಡ ಜಮೀನಿನಲ್ಲಿ 1600 ಬಾಳೆ ಬಿರುಗಾಳಿಗೆ ಸಿಲುಕಿ ನಷ್ಟ ಉಂಟಾಗಿದೆ ಎಂದು ರೈತರು ತಿಳಿಸಿದ್ದಾರೆ.
ನೆನ್ನೆ ಸಂಜೆ ಸಣ್ಣ ಮಳೆ ಸಹಿತ ಬಿರು ಬೀಸಾಗಿ ಬೀಸುತ್ತಿದ್ದ ಗಾಳಿಗೆ ಬಾಳೆಗಳು ನೆಲಕ್ಕಚ್ಚಿದ್ದು ಲಕ್ಷಾಂತರ ರೂ.ಗಳ ಬಾಳೆ ಬೆಳೆ ನಷ್ಟವಾಗಿರುವುದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಸಂಕಷ್ಟಕ್ಕೆ ಸಿಲುಕಿದ ರೈತರು ಹಾಗೂ ರೈತ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
ಶಾಸಕ ಹಾಗೂ ತಹಶೀಲ್ದಾರ್ ತಂಡ ಬೇಟಿ: ಭಾರಿ ಬಿರುಗಾಳಿಗೆ ನೂರಾರು ಎಕರೆ ಬಾಳೆ ಬೆಳೆ ನಷ್ಟ ಉಂಟಾಗಿರುವ ಬಗ್ಗೆ ಮಾಹಿತಿ ತಿಳಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಶಾಸಕ ಆರ್.ನರೇಂದ್ರ, ತಹಶೀಲ್ದಾರ್ ಬಸವರಾಜು ಚಿಗರಿ ಮೀಣ್ಯಂ ರೈತರ ಜಮೀನುಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಸಾಂತ್ವಾನ ತಿಳಿಸಿದರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರವನ್ನು ಒದಗಿಸಿಕೊಡುವ ಭರವಸೆಯನ್ನು ಸಹ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳು, ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.

Leave a Comment