ಬಿಬಿಎಂಪಿ ಸ್ಥಾಯಿ ಸಮಿತಿಗೆ ಸಂಕ್ರಾಂತಿ ನಂತರ ಚುನಾವಣೆ

ಬೆಂಗಳೂರು, ಜ. ೯- ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಸಂಕ್ರಾಂತಿ ನಂತರ 16 ಇಲ್ಲವೇ 17 ರಂದು ನಡೆಯಲಿವೆ.
ಮೇಯರ್ ಗಂಗಾಂಬಿಕೆ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದ್ದು, 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ.

ಕಳೆದ ತಿಂಗಳು ಮೇಯರ್ ಅವರು ತಮ್ಮ ಕೊಠಡಿಯಲ್ಲಿ ಚುನಾವಣೆ ನಡೆಸಲು ಮುಂದಾದರೂ ಗೊಂದಲದಿಂದಾಗಿ ಮುಂದೂಡಲಾಗಿತ್ತು.

ಜೆಡಿಎಸ್‌ನ ದೇವದಾಸ್ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಮಂಜುಳಾ ನಾರಾಯಣಸ್ವಾಮಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆಗ ಉಂಟಾದ ಗೊಂದಲದಿಂದ ಚುನಾವಣೆ ನಡೆಯದೆ ಮೇಯರ್ ಅವರು ಮುಂದೂಡಿದರು. ಕಳೆದ ಶನಿವಾರ ಮತ್ತೇ ಚುನಾವಣೆ ನಡೆಸಲಾಗುವುದು ಎಂದು ಹೇಳಲಾಗಿದ್ದರೂ ಚುನಾವಣೆ ನಡೆಯಲಿಲ್ಲ. ಇದೀಗ ಸಂಕ್ರಾಂತಿ ನಂತರ ಚುನಾವಣೆ ನಡೆಯುವ ಸಾಧ್ಯತೆಗಳು ಇವೆ.

ಬಿಬಿಎಂಪಿ ಮೇಯರ್ ಆಯ್ಕೆ ನಂತರ 12 ಸ್ಥಾಯಿ ಸಮಿತಿಗಳ  ಅಧ್ಯಕ್ಷರ ಆಯ್ಕೆ ಬಗ್ಗೆ ಯಾರು ಕೇಳುವವರೇ ಇಲ್ಲದಂತಾಗಿದೆ. ಮೇಯರ್ ಆಯ್ಕೆಯಾಗಿ 4 ತಿಂಗಳು ಕಳೆದರೂ ಯಾವುದೇ ಸ್ಥಾಯಿ ಸಮಿತಿಗಳು ಇನ್ನು ಕಾರ್ಯ ನಿರ್ವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವಲ್ಲಿ ಯಾವುದೇ ನಾಯಕರು ಅಷ್ಟು ಆಸಕ್ತಿ ತೋರದೆ ಇರುವುದರಿಂದ ಸ್ಥಾಯಿಸಮಿತಿಗಳ ಚುನಾವಣಾ ಮುಂದೂಡಲಾಗುತ್ತಿದೆ.

ಮಾಜಿ ಸಚಿವ ರಾಮಲಿಂಗಾರೆಡ್ಡಿಯವರು ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದಾರೆ. ಬಿಬಿಎಂಪಿಯಲ್ಲಿ ಎದುರಾಗುವ ಇಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಸ್ಸೀಮರಾದ ಅವರು ಸ್ಥಾಯಿ ಸಮಿತಿಗಳ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡ ಅವರು ಲೋಕಸಭೆ ಚುನಾವಣೆಯತ್ತ ಹೆಚ್ಚು ನಿಗಾವಹಿಸಿರುವುದರಿಂದ ಈ ಬಗ್ಗೆ ಆಸಕ್ತಿ ತಳೆದಿಲ್ಲ. ಹಾಗಾಗಿ ಇನ್ನು ಅಧ್ಯಕ್ಷರ ಚುನಾವಣೆ ನಡೆದಿಲ್ಲ.

ರಾಜ್ಯ ಸರ್ಕಾರ ಫೆಬ್ರವರಿ ತಿಂಗಳಲ್ಲಿ ಬಜೆಟ್‌ಅನ್ನು ಮಂಡಿಸಲಿದೆ. ನಂತರ ಬಿಬಿಎಂಪಿ ಕೂಡ ತನ್ನ ಬಜೆಟ್‌ನ್ನು ಮಂಡಿಸಬೇಕಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು  ಬಜೆಟ್ ಮಂಡಿಸಬೇಕಿದೆ. ಆದರೆ ಇನ್ನು ಅಧ್ಯಕ್ಷ ನೇಮಕವೇ ಆಗಿಲ್ಲ. ಯಾರೇ ಅಧ್ಯಕ್ಷರು ಕಡಿಮೆ ಅವಧಿಯಲ್ಲಿ ಬಜೆಟ್ ಸಿದ್ಧತೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಉಳಿದ ಸ್ಥಾಯಿ ಸಮಿತಿಗಳ ಅಧ್ಯಕ್ಷ ನೇಮಕವೂ ಆಗಿಲ್ಲದೆ ಇರುವುದರಿಂದ ಆ ಸಮಿತಿಗಳಿಗೆ ನೀಡುವ ಅನುದಾನ ಎಷ್ಟು ಎಂಬುದು ಕೂಡ ಚರ್ಚೆಯಾಗಿಲ್ಲ.

Leave a Comment