ಬಿಬಿಎಂಪಿ ಕಸದ ಕ್ವಾರಿಗೆ ಮಾರ್ಷಲ್‌ಗಳ ಕಾವಲು

(ವಿಶೇಷ ವರದಿ)
ಬೆಂಗಳೂರು, ಜು. ೧೭- ನಗರದ ಹೊರ ವಲಯದಲ್ಲಿರುವ ಬಿಬಿಎಂಪಿ ಕಸದ ಕ್ವಾರಿ ಮತ್ತು ಸಂಸ್ಕರಣಾ ಘಟಕಗಳ ಕಾರ್ಯ ನಿರ್ವಹಣೆಗೆ ಸ್ಥಳೀಯರಿಂದ ಅಡ್ಡಿಯಾಗದಂತೆ ಶಸ್ತ್ರಸಜ್ಜಿತ ನಿವೃತ್ತ ಸೈನಿಕರು (ಮಾರ್ಷಲ್) ಕಾವಲು ಕಾಯಲಿದ್ದಾರೆ.
ಕಸದ ಕ್ವಾರಿ ಮತ್ತು ಸಂಸ್ಕರಣಾ ಘಟಕಗಳ ಬಳಿ ಕಸದ ಲಾರಿ ತೆರಳದಂತೆ ಸ್ಥಳೀಯರು ತಡೆ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಈ ಘಟಕಗಳಿಗೆ ಬಿಗಿ ಬಂದೋಬಸ್ತ್ ಏರ್ಪಡಿಸುವ ಸಲುವಾಗಿ ಮಾಜಿ ಸೈನಿಕರು ಇನ್ನೊಂದೆರಡು ದಿನಗಳಲ್ಲಿ ನಿಯೋಜಿತ ಸ್ಥಳಗಳಿಗೆ ತೆರಳಲಿದ್ದಾರೆ.
ಬೆಳ್ಳಹಳ್ಳಿ ಕ್ವಾರಿ, ಮಿಟಗಾನಹಳ್ಳಿ ಕ್ವಾರಿಗಳಲ್ಲಿ ಮಾರ್ಷಲ್ ಹೆಸರಿನಲ್ಲಿ ನಿವೃತ್ತ ಸೈನಿಕರು ಕಾರ್ಯನಿರ್ವಹಿಸಲಿದ್ದಾರೆ. ಇದರ ಸಾಧಕ- ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಇತರೆ ಕ್ವಾರಿಗಳಿಗೆ ನಿವೃತ್ತ ಸೈನಿಕರನ್ನು ನೇಮಕ ಮಾಡಲು ಪಾಲಿಕೆ ನಿರ್ಧರಿಸಿದೆ.
ನಗರದಲ್ಲಿ ಹಸಿ- ಕಸ, ಒಣಕಸ ಎಂದು ವಿಂಗಡಣೆ ಮಾಡಬೇಕು ಎಂದು ಕಡ್ಡಾಯವಾಗಿ ಆದೇಶ ಹೊರಡಿಸಿದ್ದರೂ ಬಹುತೇಕ ಕಡೆ ನಾಗರಿಕರು ವಿಂಗಡಣೆ ಬಗ್ಗೆ ನಿರಾಸಕ್ತಿ ತೋರಿದ್ದರು.
ಮಾರ್ಷಲ್‌ಗಳನ್ನು ನೇಮಕ ಮಾಡಿಕೊಂಡು ಆ ಮೂಲಕ ಕಸ ವಿಂಗಡಿಸದಿದ್ದ ನಾಗರಿಕರಿಗೆ ದಂಡದ ಬರೆ ಹಾಕಲು ಹೊರಟಿದ್ದ ಪಾಲಿಕೆ ಉದ್ದೇಶಕ್ಕೆ ಸದಸ್ಯರಿಂದಲೇ ತೀವ್ರ ವಿರೋಧ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಸ್ಥಗಿತಗೊಳಿಸಲಾಗಿತ್ತು.
ನಂತರದಲ್ಲಿ ಪಾಲಿಕೆ ಕ್ವಾರಿ ಮತ್ತು ಕಸ ಸಂಸ್ಕರಣಾ ಘಟಕಗಳ ಬಳಿ ಸ್ಥಳೀಯರಿಂದ ಆಗುತ್ತಿದ್ದ ವಿರೋಧ ಹತ್ತಿಕ್ಕಲು ಮಾರ್ಷಲ್‌ಗಳ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿದೆ.
ಪ್ರತಿ ಸಂಸ್ಕರಣಾ ಘಟಕಗಳಿಗೆ 3 ಪಾಳೀಯಗಳಲ್ಲಿ 5 ಮಂದಿಯಂತೆ ಒಟ್ಟು 15 ಮಾರ್ಷಲ್‌ಗಳು ಇರುತ್ತಾರೆ. ಈ ತಂಡಗಳು ಅಕ್ರಮವಾಗಿ ಕಸ ಸುರಿಯುವವರ ವಿರುದ್ಧವು ನಿಗಾವಹಿಸಲಿದೆ.
ಕ್ವಾರಿ ಪ್ರಮಾಣ ನೋಡಿಕೊಂಡು ಎಷ್ಟು ಮಂದಿ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ನಿರ್ಧರಿಸಲಾಗುತ್ತದೆ. ಅವರು ಸಿಂಗಲ್ ಮತ್ತು ಡಬ್ಬಲ್ ಬ್ಯಾರೆಟ್ ರೈಫಲ್‌ಗಳನ್ನು ಒದಗಿಸಲಾಗುವುದು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ಖಾನ್ ಹೇಳಿದ್ದಾರೆ.
ಪಾಲಿಕೆ ಮಾಸಿಕ ಸಭೆಯಲ್ಲಿ ಕಸದ ಕ್ವಾರಿ ಮತ್ತು ಸಂಸ್ಕರಣಾ ಘಟಕಗಳಲ್ಲಿ ಮಾರ್ಷಲ್‌ಗಳ ನೇಮಕಕ್ಕೆ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಬಾಗಲೂರು, ಮಿಟಗಾನಹಳ್ಳಿ, ಕಣ್ಣೂರು ಬೆಳ್ಳಹಳ್ಳಿ ಲ್ಯಾಂಡ್ ಪಿಲ್‌ಗಳಿಗೆ ಕಾಱ್ಯ ನಿರ್ವಹಣೆಗೆ ತೊಂದರೆಯಾಗದಂತೆ ಈ ಮಾರ್ಷಲ್‌ಗಳು ಜವಾಬ್ದಾರಿ ಹೊರಲಿದ್ದಾರೆ.
ಪ್ರತಿಮಾರ್ಷಲ್‌ಗಳ ಸೇವೆಗಾಗಿ ಮಾಸಿಕ 25 ಸಾವಿರ ರೂ. ನೀಡಲಾಗುವುದು.
ಬಿಬಿಎಂಪಿ ಮಾಸಿಕ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ರಾಜ್ಯ ನಿವೃತ್ತ ಸೈನಿಕರ ಕಲ್ಯಾಣಾಭಿವೃದ್ಧಿ ಸಂಘದ ರಾಜೀವ್ ಸಿಂಗ್ ತಿಳಿಸಿದ್ದಾರೆ.
ಈಗಾಗಲೇ ಕಸದ ಕ್ವಾರಿ ಮತ್ತು ಸಂಸ್ಕರಣಾ ಘಟಕಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಮಾರ್ಷಲ್‌ಗಳಿಗೆ ತರಬೇತಿ ಕೂಡ ನೀಡಲಾಗಿದೆ.

ಬಾಕ್ಸ್
20 ವಾರ್ಷಲ್‌ಗಳ ನೇಮಕ
ಸದ್ಯಕ್ಕೆ ಬೆಳ್ಳಹಳ್ಳಿ, ಮಿಟಗಾನಹಳ್ಳಿ ಕಸದ ಕ್ವಾರಿ ಘಟಕಗಳಲ್ಲಿ ಮಾರ್ಷಲ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಕರ್ನಾಟಕ ಸೈನಿಕ ಮಂಡಳಿ ನೀಡಿದ ಪಟ್ಟಿ ಅನ್ವಯ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಪ್ರಾರಂಭದಲ್ಲಿ 20 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ನಂತರದಲ್ಲಿ ಉಳಿದ ಕಸದ ಕ್ವಾರಿ ಮತ್ತು ಸಂಸ್ಕರಣಾ ಘಟಕಗಳಿಗೆ ಮಾರ್ಷಲ್‌ಗಳ ನೇಮಕವಾಗಲಿದೆ.
ಸರ್ಫರಾಜ್‌ಖಾನ್
ಘನತ್ಯಾಜ್ಯ ಘಟಕ
ಜಂಟಿ ಆಯುಕ್ತರು.

Leave a Comment