ಬಿದ್ರಿ ಕಲೆಗೊಂದು ಸಮ್ಮಾನ

ಬಿದ್ರಿ ಕಲೆ ಕರ್ನಾಟಕದ ಪಾರಂಪರಿಕ ಕಲೆಗಳಲ್ಲಿ ಒಂದಾಗಿದೆ. ಕ್ರಿ.ಶ. ೧೪ ನೆಯ ಶತಮಾನದಲ್ಲಿ ಬಹಮನಿ ಸುಲ್ತಾನರಿಂದ ಪ್ರವರ್ಧಮಾನಕ್ಕೆ ಬಂದಂತಹ ಈ ಕಲೆಯು ಬೀದರ್ ನಗರದ ಅನ್ವರ್ಥವನ್ನೆ ಬಳಸಿಕೊಂಡು ಬಿದರಿ-ಬಿದ್ರಿ ಕಲೆಯಾಗಿ ಪ್ರಸಿದ್ಧಿಯಾಗಿದೆ.
ಐತಿಹಾಸಿಕವಾಗಿ ಬಿದ್ರಿ ಕಲೆಯ ಉಗಮವು ಪರ್ಶಿಯಾ ದೇಶದಲ್ಲಾಗಿದೆ. ಭಾರತದಲ್ಲಿ ಮುಸ್ಲಿಮ್ ರಾಜಮನೆತನಗಳು ಆಳ್ವಿಕೆ ಪ್ರಾರಂಭಿಸಿದ ಸಂದರ್ಭಗಳಲ್ಲಿ ತಮ್ಮದೇ ದೇಶದ ವಾಸ್ತು ಮತ್ತು ಕಲಾ ಸಂವೇದನೆಗಳನ್ನು ನಮ್ಮ ನೆಲದಲ್ಲಿ ಬಿತ್ತಲು ಪ್ರಾರಂಭಿಸಿದರು. ಪರ್ಶಿಯಾ ದೇಶದಿಂದಲೇ ವಾಸ್ತು ಪರಿಣಿತರನ್ನು ಮತ್ತು ಚಿತ್ರಕಲಾವಿದರನ್ನು ಭಾರತಕ್ಕೆ ಕರೆತಂದು ಅವರ ಮಾರ್ಗದರ್ಶನದಲ್ಲಿ ಇಲ್ಲಿ ಕಲಾಕೃತಿಗಳ ರಚನೆ ಮತ್ತು ಕಟ್ಟಡಗಳ ನಿರ್ಮಾಣ ಮಾಡಿರುವುದನ್ನು ಇತಿಹಾಸದ ಪುಟಗಳಲ್ಲಿ ನೋಡುತ್ತೇವೆ, ಪರ್ಶಿಯಾ ದೇಶದಲ್ಲಿ ಈ ಮೊದಲೇ ಪ್ರಚಲಿತದಲ್ಲಿದ್ದ ಈ ಕಲೆಯಲ್ಲಿ ದೈನಂದಿನ ಉಪಯೋಗಿ ಹುಕ್ಕಾ, ಅಲಂಕಾರಿಕ ತಟ್ಟೆಗಳು, ಪಾತ್ರೆ, ಅಲ್ಲದೇ ಅತಿಥಿಗಳಿಗೆ ನೀಡಲಾಗುವ ವಿಶಿಷ್ಟವಾದ ನೆನಪಿನ ಕಾಣಿಕೆ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಇಂದು ದೇಶ-ವಿದೇಶಗಳಲ್ಲಿ ಜನಪ್ರಿಯವಾಗಿರುವ ಬಿದ್ರಿ ಕಲೆಯ ವಸ್ತುಗಳು ಐತಿಹಾಸಿಕ ಹಾಗೂ ಕಲಾತ್ಮಕವಾದ ಮಹತ್ವವನ್ನು ಹೊಂದಿವೆ. ಬೀದರ್ ನಲ್ಲಿಯ ಕಲಾಕೃತಿಗಳು ಬಿದರಿನ ಮಣ್ಣಿನ ಮಹತ್ವವನ್ನು ಪಡೆದು ಬೆಳವಣಿಗೆಯಾಗಿವೆ.
ತಾಂತ್ರಿಕತೆ
ಬಿದ್ರಿ ಕಲಾತ್ಮಕ ವಸ್ತುಗಳ ತಯಾರಿಯ ತಾಂತ್ರಿಕತೆ ಬಹು ವಿಶಿಷ್ಟವಾಗಿದೆ. ಸಾಮಾನ್ಯವಾಗಿ ಬಿದ್ರಿ ವಸ್ತುಗಳು, ಗಾಢವಾದ ಕಡುಕಪ್ಪು ಹಿನ್ನೆಲೆಯ ಮೇಲೆ ಸುಂದರವಾದ ವಿನ್ಯಾಸಗಳ ರಚನೆಗಳನ್ನು ಹೊಂದಿರುತ್ತವೆ. ಈ ವಸ್ತುಗಳ ಹಿನ್ನೆಲೆಯು ಕಪ್ಪು ಬಣ್ಣಕ್ಕೆ ತರಲು ಸ್ಥಳೀಯ ಕೋಟೆಯೊಳಗಿನ ಮಣ್ಣಿನ ಗುಣಧರ್ಮವೆಂದು ತಿಳಿಯಲಾಗಿದೆ. ಬಹುಷಃ ಅಲ್ಲಿನ ಕಲಾವಿದರ ಪ್ರಕಾರ ಬೀದರಿನಲ್ಲಿ ತಯಾರಾಗುವ ಕಲಾಕೃತಿಗಳಷ್ಟು ಸುಂದರವಾದ ಕಲಾಕೃತಿಗಳು ಬೇರೆಲ್ಲೂ ಸಾಧ್ಯವಿಲ್ಲವೆಂಬುದು ಅವರ ಅಭಿಮತ.
ತಾಂತ್ರಿಕವಾಗಿ ಈ ಕಲಾಕೃತಿಗಳನ್ನು ರಚಿಸಲು ಒಂದು ಶಿಲ್ಪವನ್ನು ತಯಾರಿಸಲು ಕೈಗೊಳ್ಳುವ ಎಲ್ಲ ಹಂತದ ಕ್ರಮಗಳನ್ನು ಅನುಸರಿಸಲಾಗುತ್ತದೆ. ಬಿದ್ರಿ ಕಲಾತ್ಮಕ ವಸ್ತುಗಳನ್ನು ಕಂಚು ಮತ್ತು ಸತುವು ಲೋಹಗಳ ೧:೧೬ರ ಅನುಪಾತದ ಮಿಶ್ರಣದಿಂದ ತಯಾರಿಸಲಾಗುತ್ತದೆ. ಉದ್ದೇಶಿತ ಆಕಾರದ ವಸ್ತುವನ್ನು ತಯಾರಿಸಿ- ಅಚ್ಚಿನಲ್ಲಿ ಈ ಮಿಶ್ರಣದ ಲೋಹವನ್ನು ಕಾಯಿಸಿ ಎರಕ ಹೊಯ್ಯಲಾಗುತ್ತದೆ. ಮರಳು ಪೆಟ್ಟಿಗೆ (ಸ್ಯಾಂಡ್ -ಬಾಕ್ಸ್) ಪದ್ಧತಿಯಲ್ಲಿ ಎರಕದ ವಸ್ತುಗಳನ್ನು ಪ್ರಸ್ತುತದಲ್ಲಿ ತಯಾರಿಸಲಾಗುತ್ತದೆ. ಇದರಿಂದ ಉದ್ದೇಶಿತ ಆಕೃತಿಯ ಮೂಲ ವಿನ್ಯಾಸ ಮೊದಲೇ ಸಿದ್ಧವಾಗಿದ್ದು, ಅದರ ಪ್ರತಿಗಳನ್ನು ಈ ಎರಕ ಹೊಯ್ಯುವ ವಿಧಾನದಿಂದ ತಯಾರಿಸಲಾಗುತ್ತದೆ. ತಯಾರಿಕೆಯಲ್ಲಿ ಸುಮಾರು ಎಂಟು ಹಂತದ ತಾಂತ್ರಿಕತೆಯನ್ನು ಅನುಸರಿಸಲಾಗುತ್ತದೆ. ಮುಖ್ಯವಾಗಿ ಅಚ್ಚು ಹಾಕುವುದು, ಉಜ್ಜಿ ನಯಗೊಳಿಸುವುದು, ಉಳಿಯಿಂದ ವಿನ್ಯಾಸಗಳನ್ನು ಕೆತ್ತುವುದು, ಸುತ್ತಿಗೆ-ಉಳಿಗಳಿಂದ ಆಳವಾಗಿ ವಿನ್ಯಾಸಗೊಳಿಸುವುದು, ಇವುಗಳಲ್ಲಿ ಶುದ್ಧ ಬೆಳ್ಳಿಯ ತಂತಿಯಿಂದ ವಿನ್ಯಾಸಗಳಲ್ಲಿ ತುಂಬಿ ಗಟ್ಟಿಯಾಗಿ ಒಳಗೆ ಸಮೀಕರಿಸಲಾಗುತ್ತದೆ. ನಂತರದಲ್ಲಿ ನಿರ್ದಿಷ್ಟವಾದ ಶಾಖದಲ್ಲಿ ಕಾಯಿಸಿ ಬಣ್ಣಗಟ್ಟಿಸುವುದು. ಬಣ್ಣಗಟ್ಟಿಸುವುದಕ್ಕೆ ತಾಮ್ರದ ಸಲ್ಫೇಟನ್ನು ಉಪಯೋಗಿಸಲಾಗುತ್ತದೆ.
ವಿಶಿಷ್ಟವಾದ ವಿನ್ಯಾಸಗಳು.
ಬಿದ್ರಿ ಕಲೆಯಲ್ಲಿ ಅರಳಿರುವ ಕಲಾತ್ಮಕ ವಿನ್ಯಾಸಗಳು ಬಹು ಆಕರ್ಷಕವು ಮತ್ತು ಅತ್ಯಂತ ಸುಂದರ ಹಾಗೂ ಮನೋಜ್ಞವೂ ಆಗಿವೆ. ಸಾಮಾನ್ಯವಾಗಿ ಈ ಕಲಾತ್ಮಕ ವಸ್ತುಗಳ ವಿನ್ಯಾಸವು ಆಕೃತಿಗಳ ವಿನ್ಯಾಸಕ್ಕೆ ಪೂರಕವಾದ ರಚನೆಯಾಗಿರುತ್ತದೆ. ಕಲಾವಿದರು- ಅತ್ಯಂತ ಕುಸುರಿನ ಕಲೆಯ ನಿಪುಣರಾಗಿದ್ದು, ಸರಳವಾದ ರೇಖಾಕೃತಿಗಳಿಂದ ಮೂಲ ವಿನ್ಯಾಸವನ್ನು ಚೂಪಾದ ಮೊಳೆಯಂತಹ ಸಾಧನದಿಂದ ವಸ್ತುವಿನ ಮೇಲೆ ರಚಿಸಲಾಗುತ್ತದೆ. ನಂತರದಲ್ಲಿ ಆ ರೇಖಾಕೃತಿಯನ್ನು ಅನುಸರಿಸಿ ಹರಿತವಾದ ಸಾಧನದಿಂದ ಆಕೃತಿಯನ್ನು ನಿರ್ಮಿಸಲಾಗುತ್ತದೆ. ಇದನ್ನೇ ನಾವು ಸಮಕಾಲೀನ ಮುದ್ರಣ ಕಲೆಯಲ್ಲಿ ಉಪಯೋಗಿಸುವ ಎನ್‌ಗ್ರೇವಿಂಗ್ ಅಥವಾ ಎಚ್ಚಿಂಗ್ ಎಂತಲೂ ಕರೆಯಬಹುದು. ಕಂದರಿಸುವಿಕೆಯಾದ ನಂತರದಲ್ಲಿ, ಬೆಳ್ಳಿಯ ತಂತಿ (ಸಾಮಾನ್ಯವಾಗಿ ಉಪಯೋಗಗೊಳ್ಳುವುದು) ಅಥವಾ ಹೆಚ್ಚಿನ ಮೊತ್ತದಲ್ಲಿ ಆದರೆ ಚಿನ್ನದ ಅಥವಾ ತಾಮ್ರದ ತಂತಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ವಿನ್ಯಾಸಕ್ಕೆ ಸರಿಯಾಗಿ ತಂತಿಗಳನ್ನು ಅವುಗಳಲ್ಲಿಟ್ಟು ಸುತ್ತಿಗೆಯಿಂದ ಹದವಾಗಿ ಹೊಡೆಯುತ್ತ ಅವುಗಳನ್ನು ಒಳ ಸೇರಿಸಲಾಗುತ್ತದೆ. ಹುದುಗುಕಲೆಯಂತೆಯೇ ಈ ವಿಧಾನವಾಗಿದ್ದು, ಮರದ ಇನ್ಲೆ ಕೆಲಸವನ್ನು ಜ್ಞಾಪಕಕ್ಕೆ ತರುತ್ತದೆ. ತಂತಿಯನ್ನು ವಿನ್ಯಾಸದಲ್ಲಿ ಅಳವಡಿಸಿದ ನಂತರ ಚೆನ್ನಾಗಿ ಅದು ಆಕೃತಿಯೊಂದಿಗೆ ಸೇರಿಕೊಳ್ಳುವಂತೆ ಗಟ್ಟಿಯಾಗಿ ಬಡಿದು, ಉಜ್ಜಿ ನಯಗೊಳಿಸಲಾಗುತ್ತದೆ. ವಿನ್ಯಾಸದ ಕೆಲಸವು ಸಂಪೂರ್ಣವಾದಾ ಮೆಲೆಯೇ ಮಣ್ಣಿನ ದ್ರಾವಣದಲ್ಲಿ ವಸ್ತುವನ್ನು ಅದ್ದಿ ಕಪ್ಪು ಬಣ್ಣ ಗಟ್ಟಿಸುವ ಕೆಲಸ ಆಗುತ್ತದೆ. ಪುನಃ ಅದನ್ನು ಚೆನ್ನಾಗಿ ಉಜ್ಜಿದ ಮೇಲೆ ಹೊಳಪುಗಟ್ಟುತ್ತದೆ. ಇಲ್ಲಿಗೆ ಬಿದ್ರಿಯ ಕಲಾತ್ಮಕ ವಸ್ತುವಿನ ತಯಾರಿಯಾದಂತಾಯಿತು. ಆಕೃತಿ ಯಾವುದೇ ಇರಲಿ, ಉದಾಹರಣೆಗೆ ತಟ್ಟೆ, ಹೂಜಿ, ಬಟ್ಟಲು, ಹೂದಾನಿ, ಆಭರಣಗಳು, ಕೈಬಳೆಗಳು, ಹುಕ್ಕಾ, ಗೋಡೆಯ ಅಲಂಕಾರಿಕ ತಟ್ಟೆಗಳು, ಡಬ್ಬಿ, ಪೆಟ್ಟಿಗೆ, ಪ್ರಾಣಿ, ಪಕ್ಷಿಗಳು, ಭಾವ ಶಿಲ್ಪಗಳು, ದೇವತಾ ಅಲಂಕಾರಿಕ ಆಕೃತಿಗಳು ಹೀಗೆ ಯಾವುದೇ ಇದ್ದರೂ ಅದರ ರಚನಾ ವಿಧಾನವು ಮೇಲಿನ ತಾಂತ್ರಿಕತೆಯನ್ನೇ ಅನುಸರಿಸಬೇಕಾಗುತ್ತದೆ.

ಬಿದ್ರಿ ಕಲೆಯ ವಿನ್ಯಾಸಗಳ ವ್ಯಾಪ್ತಿ ಸಾಕಷ್ಟು ವಿಶಿಷ್ಟವಾಗಿದೆ. ಸಾಮಾನ್ಯವಾಗಿ ಈ ಕಲೆಯಲ್ಲಿಯೂ ಪರ್ಸಿಯನ್ ಕಲಾ ಪ್ರಭಾವವು ಗಣನೀಯವಾಗಿ ಕಂಡುಬರುತ್ತದೆ. ಅಂದಿನ ಸಮಕಾಲೀನ ವಾಸ್ತು ಅಲಂಕರಣದಲ್ಲಿ, ಚಿತ್ರಕಲೆಯಲ್ಲಿ ದುಡಸಿಕೊಳ್ಳಲಾಗುತ್ತಿದ್ದ ಅರಾಬಿಕ್(ಅರಬಸ್ಕ್) ವಿನ್ಯಾಸಗಳು ಇಲ್ಲಿನ ಬಿದ್ರಿ ಕಲೆಯಲ್ಲಿ ಕಂಡುಬರುತ್ತವೆ. ಜಾಮಿತಿಕ ಆಕೃತಿಗಳ ವೃತ್ತ, ತ್ರಿಕೋನ, ಅಷ್ಟಕೋನ, ಆಯಾತ, ಚೌಕ ಹೀಗೆ ಇವುಗಳಿಂದಾಗುವ ವಿನ್ಯಾಸಗಳು, ಇವುಗಳ ಮಧ್ಯೆದಲ್ಲಿ ಸರಳವಾದ ಸುಂದರವಾದ ಸರಳ ಹೂಬಳ್ಳಿಗಳ -ಆಕೃತಿಗಳ ಚಿತ್ರ-ಚಿತ್ತರಿಸಲಾಗಿರುತ್ತದೆ. ಈ ಚಿತ್ರಗಳಲ್ಲಿಯೇ ಆಳವಾಗಿ ಕಂಡರಿಸಿ-ಬೆಳ್ಳಿಯ ಎಳೆಗಳನ್ನು ತುಂಬಿ- ನಂತರ ಸುತ್ತಿಗೆಯಿಂದ ಗಟ್ಟಿಯಾಗಿ ಬಡಿದು ಮತ್ತಷ್ಟು ಗಟ್ಟಿಗೊಳಿಸಲಾಗುತ್ತದೆ.
ಬಿದ್ರಿ ಕಲಾ ವಸ್ತುಗಳಲ್ಲಿ ವಿವಿಧ ವಿನ್ಯಾಸಗಳ ಹೂ-ಬಳ್ಳಿಗಳು ಚಿತ್ರಣಗೊಳ್ಳುತ್ತವೆ. ವಿಶೇಷವಾಗಿ ಅರೆಬಿಯಾದ ಪಾರಂಪರಿಕ (ಅಶ್ರಪಿ-ಕಿ-ಬೂಟಿ) ಎಲೆಗಳು, ದ್ರಾಕ್ಷಿಯ ಎಲೆಗಳು-ಬಳ್ಳಿ ಮೊದಲಾದ ವಿನ್ಯಾಸಗಳು ಕಂಡುಬರುತ್ತವೆ. ಸಮಕಾಲೀನ ಇಸ್ಲಾಮಿಕ್ ವಿನ್ಯಾಸಗಳನ್ನು ಇಲ್ಲಿ ಗಮನಿಸಬಹುದು. ಅಗಣಿತವಾದ ಹುಗಳ ವಿನ್ಯಾಸ, ಸುಂದರವಾದ ಸರಳವಾದ ಬಳ್ಳಿಗಳು ಬಹುವಾಗಿ ಗಮನ ಸೆಳೆಯುತ್ತವೆ. ವಿನ್ಯಾಸಗಳಲ್ಲಿ ಅಂದಿನ ಬಹಮನಿ, ಬಿಜಾಪುರ, ಅಹ್ಮದನಗರ್ ಮೊದಲಾದ ಇಸ್ಲಾಮಿಕ್ ಸುಲ್ತಾನರ ಕಾಲದ ಕಟ್ಟಡಗಳಲ್ಲಿ ಈ ವಿನ್ಯಾಸಗಳು ಅಲಂಕಾರಿಕವಾಗಿ ಉಪಯೋಗವಾಗಿವೆ. ಆ ಕಾಲದ ಕಂಬಳಿಗಳು (ರತ್ನಗಂಬಳಿ), ಬಟ್ಟೆಗಳ ಮೇಲೆ ಮರದಚ್ಚಿನ ಮುದ್ರಣದಲ್ಲಿ, ಹಾಗೂ ಕಿಡಕಿಗಳ ಜಾಲಂಧ್ರಗಳ ವಿನ್ಯಾಸದಲ್ಲಿ ಮತ್ತು ಗೋಡೆಗಳಿಗೆ ಅಂಟಿಸಲಾಗಿರುವ ಹೊಳಪಿನ ಸೆರಾಮಿಕ್ ಫಲಕಗಳಲ್ಲಿಯೂ ಅರಬಸ್ಕ್ ವಿನ್ಯಾಸದ ಚಿತ್ತಾರಗಳು ಕಂಡುಬರುತ್ತವೆ. ಇದರಿಂದಾಗಿ ಬಿದ್ರಿಯ ಮೂಲ ವಿನ್ಯಾಸಗಳು ಸಮಕಾಲೀನ ಕಲಾ ಸಂವೇದನೆಯಲ್ಲಿಯೇ ಅಭಿವೃದ್ಧಿಯಾದವು. ಹೀಗಾಗಿ ತನ್ನತನವನ್ನು ಗಟ್ಟಿಯಾಗಿ ಉಳಿಸಿಕೊಳ್ಲಲು ಸಾಧ್ಯವಾಗಿದೆ.
ಕಲಾವಿದರು
ಬೀದರ್ ನಲ್ಲಿಯ ಬಿದ್ರಿ ಕಲೆಯ ಕಲಾವಿದರ ಸುಮಾರು ೫೦-೬೦ ಕುಟುಂಬಗಳು ಈ ವೃತ್ತಿಯನ್ನು ಪರಂಪರಾಗತವಾಗಿ ಮಾಡಿಕೊಂಡು ಬಂದಿವೆ. ಇಂದಿಗೂ ಹಲವಾರು ಕುಟುಂಬಗಳು ಈ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿವೆ. ಕಲಾವಿದರಲ್ಲಿ ಮುಖ್ಯವಾಗಿ ಮುಸ್ಲಿಮ್ ಮತ್ತು ಲಿಂಗಾಯತ ಸಮುದಾಯದ ಕಲಾವಿದರಿದ್ದಾರೆ. ವಯಕ್ತಿಕವಾಗಿ ಬಹುತೇಕ ಕಲಾವಿದರು ಕೌಟಂಬಿಕವಾದ ವೃತ್ತಿ ಇದಾಗಿದೆ. ಹೀಗಾಗಿ ಸಂಘಟಿತವಾಗಿ ಎಲ್ಲರೂ ಇಂದಿನ ಮಾರುಕಟ್ಟೆಯ ಅವಶ್ಯಕತೆಯನ್ನು ಅರಿತೇ ಕಲಾಕೃತಿಗಳನ್ನು ರಚಿಸಿ ಒದಗಿಸುತ್ತಾರೆ. ಪಾರಂಪರಿಕ ಕಲಾತ್ಮಕ ವಸ್ತುಗಳ ಜೊತೆಗೆ ಸಮಕಾಲೀನ ವಸ್ತುಗಳ ಬಗ್ಗೆಯೂ ಅವರ ಆಸಕ್ತಿ ತಿರುಗಿದೆ.
ಬಿದ್ರಿ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಕೊಂಡಯ್ಯಲು ಹಲವಾರು ಕಲಾವಿದರ ಶ್ರಮವಿದೆ. ಒಂದಡೆ ಮಾರುಕಟ್ಟೆಯಾದರೆ, ಮತ್ತೊಂದಡೆ ಪಾರಂಪರಿಕ ತಾಂತ್ರಿಕತೆ, ವಿನ್ಯಾಸಗಳನ್ನು ಕಾಪಾಡಿಕೊಂಡು ಬರುವುದು ಮುಖ್ಯವಾಗುತ್ತದೆ. ಬೀದರಿನ ಖಾದ್ರಿ ಕುಟುಂಬದ ಕಲಾವಿದರು ಇದನ್ನು ಸಾಧಿಸಿ ತೋರಿಸಿದ್ದಾರೆ. ಈ ಕುಟುಂಬದ ಷಾ ರಷೀದ್ ಅಹ್ಮದ್ ಖಾದ್ರಿ ಮತ್ತು ಅವರ ತಂದೆ ಷಾ ಮುಸ್ತಫಾ ಖಾದ್ರಿ ಇವರು ಪಾರಂಪರಿಕವಾದ ಬಿದ್ರಿಯ ಕಲೆಯನ್ನು ಉಳಿಸಿಕೊಂಡು ಹೊಸ ಹೊಸ ಪ್ರಯೋಗಗಳನ್ನೂ ಮಾಡಿದ್ದಾರೆ. ಇವರಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳೂ ದೊರೆತಿವೆ. ಪ್ರಜಾ ಗಣತಂತ್ರದ ದಿಲ್ಲಿಯ ಮೆರವಣಿಗೆಯಲ್ಲಿ ಬಿದ್ರಿ ಕಲೆಯ ಸ್ಥಬ್ಧ ಚಿತ್ರವನ್ನು ಇವರ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರದರ್ಶಿಸಲಾಗಿದ್ದು ಹೆಮ್ಮೆಯ ವಿಚಾರಾವಾಗಿದೆ.

ಬಿದ್ರಿ ಕಲೆಯ ಕಲಾತ್ಮಕ ವಸ್ತುಗಳು ಬೀದರ್ ಅಲ್ಲದೇ ಹೈದರಾಬದ್ ಹಾಗೂ ಔರಂಗಾಬಾದ್‌ಗಳಲ್ಲಿಯೂ ಕಲಾವಿದರು ತಯಾರಿಸುತ್ತಾರೆ. ಆದರೇ ಬೀದರಿನ ಕಲಾ ವಸ್ತುಗಳ ಉತ್ಕೃಷ್ಟತೆಗೆ ಸಮವಾಗಲಾರವು. ಹಲಾವಾರು ವಸ್ತು ಸಂಗ್ರಹಳಲ್ಲಿ ಈ ಕಲಾತ್ಮಕ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಹೈದರಾಬಾದಿನ ಸರ್ ಸಾಲಜಂಗ್, ಮುಂಬೈನ ಪ್ರಿನ್ಸ್ ಆಫ್ ವೇಲ್ಸ್, ಕಲ್ಕತ್ತಾದ ಇಂಡಿಯನ್ ಮ್ಯುಜಿಯಂ, ದಿಲ್ಲಿಯ ನ್ಯಾಷ್ತನಲ್ ಮ್ಯುಜಿಯಂ ಹೀಗೆ ರಾಷ್ಟ್ರವ್ಯಾಪಿಯಾಗಿ ಪ್ರದರ್ಶಿತವಾಗಿವೆ.
ಬಿದ್ರಿ ಕಲೆಯ ಅಭಿವೃದ್ಧಿಯಲ್ಲಿ ರಾಜ್ಯ ಕರಕುಶಲಾಭಿವೃದ್ಧಿ ನಿಗಮದ ಮಹತ್ತರವಾದ ಪಾತ್ರವಿದೆ. ಆದರೆ ಪ್ರಸ್ತುತ ಕರ್ನಾಟಕ ಚಿತ್ರಕಲಾ ಪರಿಷತ್ತು ಈ ಕಲೆಯ ಪುನರುಜ್ಜೀವನ- ಪುನರುತ್ಥಾನ ಕೆಲಸವನ್ನು ಕೈಗೊಂಡಿದ್ದು, ಅಲ್ಲಿನ ಕಲಾವಿದರನ್ನು ಆಹ್ವಾನಿಸಿ ಯುವ ಕಲಾವಿದರಿಗೆ ತರಬೇತು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಇಂತಹ ಹಲವಾರು ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರದ ಸಹಾಯದಿಂದ ಆಯೋಜಿಸುತ್ತ ಬಂದಿದೆ, ಪ್ರಸ್ತುತ ಬಿದ್ರಿ ಕಲೆಯ ಕಾರ್ಯಾಗಾರವು ಅಂತಹ ಒಂದು ಪ್ರಯತ್ನವಾಗಿದೆ. ಬಿದ್ರಿ ಕಲೆ ಇದೊಂದು ಆದರದ ಗೌರವಪೂರಕವಾದ ಸಮ್ಮಾನವಾಗಿದೆ.

ಡಾ.ಆರ್.ಎಚ್.ಕುಲಕರ್ಣಿ
– ಕರ್ನಾಟಕ ಚಿತ್ರಕಲಾ ಪರಿಷತ್ತು, ಬೆಂಗಳೂರು

Leave a Comment