ಬಿಜ್‌ಬೆಹರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಜೆಇಎಂ ಉಗ್ರರು ಹತ, ಓರ್ವ ಸೈನಿಕ ಹುತಾತ್ಮ

ಶ್ರೀನಗರ, ಜೂ 18 – ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆ ಶೋಧ ಕಾರ್ಯ ನಡೆಸಿದಾಗ ಉಗ್ರರು ಮತ್ತು ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಜೈಷೆ ಮೊಹಮ್ಮದ್ (ಜೆಇಎಂ) ಉಗ್ರರು ಹತರಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಷ್ಟ್ರೀಯ ರೈಫಲ್ಸ್‌ (ಆರ್‌ ಆರ್)ನ ಮೂರನೇ ತುಕಡಿ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣಾ ಪಡೆ ಅನಂತ್‌ನಾಗ್ ಜಿಲ್ಲೆಯ ವಾಗ್‌ಹೊಮ ಬಿಜ್‌ಬೆಹರಾ ಗ್ರಾಮದಲ್ಲಿ ಇಂದು ಬೆಳಗ್ಗಿನ ಜಾವ ಜಂಟಿ ಕಾರ್ಯಾಚರಣೆ ನಡೆಸಿವೆ.

ಗ್ರಾಮದ ಎಲ್ಲಾ ಒಳಬರುವ ಮತ್ತು ಹೊರಹೋಗುವ ಮಾರ್ಗಗಳನ್ನು ಬಂದ್ ಮಾಡಿ ಮನೆ ಮನೆ ಶೋಧ ನಡೆಸಲಾಯಿತು. ಭದ್ರತಾ ಪಡೆ ಗ್ರಾಮದ ಒಂದು ನಿರ್ದಿಷ್ಟ ಪ್ರದೇಶಕ್ಕೆ ತಲುಪಿದಾಗ ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆ ಕೂಡ ಪ್ರತಿ ದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆಯಿತು.

ಇದುವರೆಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಜೆಇಎಂ ಉಗ್ರರು ಹತರಾಗಿದ್ದಾರೆ. ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರಲ್ಲಿ ಓರ್ವ ಯೋಧ ಮಾರ್ಗ ಮಧ್ಯೆಯೇ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲಿಂದ ಕೊನೆಯ ಬಾರಿಗೆ ವರದಿ ಬಂದಾಗಲೂ ಗುಂಡಿನ ಚಕಮಕಿ ನಡೆಯುತ್ತಿತ್ತು ಎಂದು ಅವು ತಿಳಿಸಿವೆ.

ಕಳೆದ 24 ಗಂಟೆಗಳಲ್ಲಿ ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯ ಎರಡನೇ ಪ್ರಕರಣ ಇದಾಗಿದೆ. ಅನಂತ್‌ನಾಗ್‌ನ ಬಿದ್ರೂ ಅಕಿಂಗಮ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಕೇತನ್ ಶರ್ಮಾ ಹುತಾತ್ಮರಾಗಿದ್ದು, ಇತರ ಇಬ್ಬರು ಸೈನಿಕರು ಗಾಯಗೊಂಡಿದ್ದರು. ಓರ್ವ ಉಗ್ರ ಕೂಡ ಹತನಾಗಿದ್ದಾನೆ. ಅಲ್ಲಿ ಈಗಲೂ ಗುಂಡಿನ ಚಕಮಕಿ ನಡೆಯುತ್ತಿದೆ.

ವದಂತಿಗಳು ಹರಡದಂತೆ ತಡೆಯಲು ಅನಂತ್‌ನಾಗ್‌ನಲ್ಲಿ ಮುಂಜಾಗೃತಾ ಕ್ರಮವಾಗಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

Leave a Comment