‘ಬಿಜೆಪಿ ಸೇರುವುದಿಲ್ಲ, ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಶೃಂಗೇರಿ ಶಾಸಕ ರಾಜೇಗೌಡ ಸ್ಪಷ್ಟನೆ

ಉಜಿರೆ, ಜು.೧೧- ‘ಕ್ಷೇತ್ರದ ಜನರ ವಿಶ್ವಾಸಕ್ಕೆ ದ್ರೋಹ ಬಗೆದು ಹಣ, ಅಧಿಕಾರಕೋಸ್ಕರ ಪಕ್ಷಾಂತರ ಮಾಡುವುದಿಲ್ಲ. ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಎಂದು ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೃಂಗೇರಿ ಶಾಸಕ ರಾಜೇಗೌಡ ಸ್ಪಷ್ಪಪಡಿಸಿದರು. ಬಿಜೆಪಿಗೆ ಬರುವಂತೆ ನಿರಂತರ ಒತ್ತಡಗಳು, ಕರೆಗಳು ಬರುತ್ತಿದೆ. ಬಿಜೆಪಿಯ ಹಿರಿಯ ನಾಯಕರುಗಳು ಕರೆ ಮಾಡಿ ಹಣ, ಅಧಿಕಾರದಎಲ್ಲ ರೀತಿಯ ಆಮಿಷಗಳನ್ನೂ ಹಾಕುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಅದು ಹೆಚ್ಚಾಗಿದೆ. ಆದರೆ ತಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ರಾಜೇಗೌಡ ಪ್ರಕಟಿಸಿದ್ದಾರೆ.
ಬಿಜೆಪಿಯವರು ಅಧಿಕಾರಕ್ಕಾಗಿ ಯಾವ ಹಂತಕ್ಕೆ ಇಳಿಯಲೂ ಸಿದ್ದರಾಗುತ್ತಿದ್ದಾರೆ. ಇದು ಪ್ರಜಾಪ್ತಭುತ್ವವನ್ನು ಅಣಕಿಸುವ ಕಾರ್ಯವಾಗಿದೆ. ಒಮ್ಮೆ ಚುನಾವಣೆಯಲ್ಲಿ ಗೆದ್ದವರು ಅವಧಿ ಮುಗಿಯುವವರೆಗೂ ಆ ಪಕ್ಷದಲ್ಲಿಯೇ ಉಳಿದುಕೊಳ್ಳಬೇಕು. ಅವಧಿ ಮುಗಿದು ಮುಂದಿನ ಚುನಾವಣೆಯ ಸಂದರ್ಭದಲ್ಲಿ ಪಕ್ಷಾಂತರ ಮಾಡುವುದಿದ್ದರೆ ಮಾಡಲಿ ಎಂದರು. ಶಾಸಕಾಂಗ ಪಕ್ಷದ ಸಭೆಗೆ ಗೈರು ಎಂಬ ವರದಿ ಬರುತ್ತಿತ್ತು. ನಾನು ಮೊದಲೇ ಅನುಮತಿ ಪಡೆದು ಬಂದಿದ್ದೇನೆ. ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ ಅವರಿಂದ ಅನುಮತಿ ಪಡೆದು ಶಾಸಕಾಂಗ ಪಕ್ಷದ ಸಭೆಗೆ ಹೋಗಿರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೂ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ವಿವರಿಸಿದರು.

Leave a Comment