ಬಿಜೆಪಿ ಸೇರಲು ನೂಕುನುಗ್ಗಲು

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಮೇ ೧೭ – ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹಲವು ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಬಿಜೆಪಿಯ ಸಿದ್ಧಾಂತ, ಜನಪರ ನಿಲುವು ಹಾಗೂ ಪ್ರಧಾನಿ ಮೋದಿ ಅವರ ಆಡಳಿತ ವೈಖರಿಯನ್ನು ಮೆಚ್ಚಿ ಹಲವು ನಾಯಕರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ ನಾಯಕರುಗಳು ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದರು.

ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಪಕ್ಷ ಸೇರ್ಪಡೆಯೂ ಹೆಚ್ಚಾಗಲಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲ ಹಾಲಿ ಶಾಸಕರುಗಳೂ ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದರು.  ಪಕ್ಷದ ಕಚೇರಿಯಲ್ಲಿಂದು ಅರಸೀಕೆರೆಯ ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್‌ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾ‌ಡಿದ ಯಡಿಯೂರಪ್ಪನವರು ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಟ್ಟು ಹಲವು ನಾಯಕರು ಬಿಜೆಪಿ ಸೇರುತ್ತಿರುವುದು ಸ್ವಾಗತಾರ್ಹ ವಿಚಾರ.

ಇಂದು ಬಿಜೆಪಿಗೆ ಸೇರ್ಪಡೆಯಾದ ಪ್ರಭುಕುಮಾರ್ ಅವರು ಕಾಂಗ್ರೆಸ್‌ಗಾಗಿ ದುಡಿದವರು. ಪಕ್ಷ ಹಾಗೂ ಪ್ರಧಾನಿ ನರೇಂದ್ರಮೋದಿ ಅವರನ್ನು ಆಡಳಿತ ವೈಖರಿಯನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದಾರೆ ಎಂದರು.

ನಾಳೆಯಿಂದ ಬರ ಪ್ರವಾಸ

ನಾಳೆ ತುಮಕೂರಿನಿಂದ ಬರ ಪ್ರವಾಸ ಆರಂಭವಾಗಲಿದೆ ಎಂದ ಅವರು, ಈ ಬರ ಪ್ರವಾಸದಲ್ಲಿ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದಗೌಡ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಬರ ಪ್ರವಾಸಕ್ಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹೆಚ್ಚಿನ ಗಮನ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬರ ಪ್ರವಾಸ ನಡೆಯಲಿವೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್‌ರವರನ್ನು ಯಡಿಯೂರಪ್ಪನವರು ಪಕ್ಷದ ಚಿಹ್ನೆ ಇರುವ ಶಾಲು ಹಾಕುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.  ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಲಕ್ಷ್ಮಣ ಸವದಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಜೀಂ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Comment