ಬಿಜೆಪಿ ಸವಾಲು, ಸಿದ್ದು ಜವಾಬು

ಬೆಂಗಳೂರು, ಸೆ. ೧೩- ರಾಜ್ಯ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂಬ ಬಿಜೆಪಿ ಸವಾಲನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಬಹಿರಂಗ ಚರ್ಚೆಗೆ ಸಿದ್ದ ಎಂದಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನೂತನ ಐರಾವತ ಕ್ಲಬ್ ಕ್ಲಾಸ್ ಬಸ್‌ಗಳ ಸೇವೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಹಾಗೂ ಸಚಿವರ ವಿರುದ್ದ ಭ್ರಷ್ಟಾಚಾರದ ದಾಖಲೆಗಳನ್ನು ಮೊದಲು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಭ್ರಷ್ಟಾಚಾರ ಹಗರಣದ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂಬ ಬಿಜೆಪಿಯ ಸವಾಲಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ ಎಂದು ಪ್ರತಿ ಸವಾಲು ಹಾಕಿದರು.
ಭ್ರಷ್ಟಾಚಾರ, ಹಗರಣಗಳ ಬಗ್ಗೆ ಬಿಜೆಪಿಯವರು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆರೋಪಗಳು ಆಧಾರ ರಹಿತ ಎಂದು ಹರಿಹಾಯ್ದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲು ಅವರ ವಿರುದ್ದ ಇರುವ ಪ್ರಕರಣಗಳಿಂದ ಹೊರಬರಲಿ, ಅವರು ಸಿಲುಕಿರುವ ಹಗರಣಗಳನ್ನು ಬಗೆಹರಿಸಿಕೊಂಡು ನಮ್ಮ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ವ್ಯಂಗ್ಯವಾಡಿದರು.
 ಬಾಲಿಷ ಹೇಳಿಕೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಎಂದೂ ಪ್ರಧಾನಿಯಾಗುವುದಿಲ್ಲ ಎಂಬ ಯಡಿಯೂರಪ್ಪನವರ ಹೇಳಿಕೆ ಬಾಲಿಷವಾದುದು. ಯಾವ ಆಧಾರದ ಮೇಲೆ ಯಡಿಯೂರಪ್ಪ ಆ ರೀತಿ ಹೇಳುತ್ತಾರೆ. ಅಂದು ರಾಜೀವ್‌ಗಾಂಧಿ ಅವರು ಚಿಕ್ಕ ವಯಸ್ಸಿಗೆ ಪ್ರಧಾನಿ ಆಗಿರಲಿಲ್ಲವೇ ಎಂದು ತಿರುಗೇಟು ನೀಡಿದರು.
 ಮೆಚ್ಚುಗೆ
ಸಾರಿಗೆ ಸಚಿವರಾಗಿ ರಾಮಲಿಂಗಾರೆಡ್ಡಿ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ, ಕೆಎಸ್ಸಾರ್ಟಿಸಿ ಅಧ್ಯಕ್ಷ ಹಾಗೂ ಶಾಸಕ ಗೋಪಾಲ ಪೂಜಾರಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಬಿ. ಬಸವರಾಜು, ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್, ಬಿಎಂಟಿಸಿ ಅಧ್ಯಕ್ಷ ನಾಗರಾಜಯಾದವ್, ಕೆಎಸ್ಸಾರ್ಟಿಸಿಯ ನಿರ್ದೇಶಕ ಬಿ.ಎನ್.ಎಸ್. ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment