ಬಿಜೆಪಿ ಶಾಸಕರ ರಾಜೀನಾಮೆ ಸಿಎಂ ಸಿಡಿಸಿದ ಬಾಂಬ್

ಮಂಡ್ಯ, ಸೆ. ೧೧-ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗುತ್ತಾರೆ, ಇದರಿಂದಾಗಿ ಸಮ್ಮಿಶ್ರ ಸರ್ಕಾರ ಬಿದ್ದುಹೋಗಲಿದೆ ಎನ್ನುವುದೆಲ್ಲಾ ಬರೀ ಊಹಾಪೋಹ. ಕೆಲದಿನ ಕಾಯಿರಿ, ಐವರು ಬಿಜೆಪಿ ಶಾಸಕರು ಅವರಾಗಿಯೇ ರಾಜೀನಾಮೆ ನೀಡುತ್ತಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಬಿದ್ದುಹೋಗಲಿದೆ ಎನ್ನುವುದೆಲ್ಲಾ ಬರೀ ಊಹಾಪೋಹ. ಸ್ವಲ್ಪ ದಿನ ಕಾಯಿರಿ, ಬಿಜೆಪಿಯ ಐವರು ಶಾಸಕರು ಯೂ ಟರ್ನ್ ತೆಗೆದುಕೊಳ್ಳಲಿದ್ದಾರೆ. ಅವರ ಕೈಯ್ಯಾರೆ ರಾಜೀನಾಮೆ ಕೊಡಿಸೋಣ, ಅವರು ಯಾರು ಎನ್ನುವುದು ನಿಮಗೇ ಗೊತ್ತಾಗಲಿದೆ ಎಂದು ಹೇಳಿದರು.
ಜಾರಕಿಹೊಳಿ ಸಹೋದರರಾದ ಸಚಿವ ರಮೇಶ್ ಜಾರಕಿಹೊಳಿ ಮತ್ತು ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್‌ನ ಹಲವು ಶಾಸಕರೊಂದಿಗೆ ಬಿಜೆಪಿಗೆ ತೆರಳಲಿದ್ದಾರೆ ಎನ್ನುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಇದೆಲ್ಲಾ ಬರೀ ಊಹಾಪೋಹ. ಅವರು ಬಿಜೆಪಿಗೆ ಹೋಗುತ್ತಾರೆ, ಸರ್ಕಾರ ಬಿದ್ದುಹೋಗಲಿದೆ ಎನ್ನುವುದು ಬರೀ ವದಂತಿ ಎಂದರು.
ಜೆಡಿಎಸ್, ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಆಡಳಿತವನ್ನು ನಡೆಸಲಿದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ಧವೇ ಕುಮಾರಸ್ವಾಮಿ ಗರಂ ಆದರು.
ಬಿಜೆಪಿ ನಾಯಕರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರೆ, ನಮಗೂ ಕೂಡ ಆಪರೇಷನ್ ಮಾಡುವ ದಾರಿ ಗೊತ್ತಿದೆ. ನಾವೇನು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಕೆಲದಿನ ಕಾಯಿರಿ, ನಿಮಗೇ ಗೊತ್ತಾಗಲಿದೆ, ಯಾರೆಲ್ಲಾ ನಮ್ಮೊಂದಿಗೆ ಬರುತ್ತಾರೆ ಎಂದು ಹೇಳಿದ್ದಾರೆ.

Leave a Comment