ಬಿಜೆಪಿ ವಿರುದ್ಧ ತೊಡೆ ತಟ್ಟಿದ ಸಿಎಂ : ಸರ್ಕಾರ ಅಸ್ಥಿರತೆಗೆ ಕಾರ್ಯತಂತ್ರ ಹೆಚ್‌ಡಿಕೆ ಸವಾಲು

ಬೆಂಗಳೂರು, ಸೆ. ೮- ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಅದು ಹೇಗೆ ಸರ್ಕಾರವನ್ನು ಬೀಳಿಸುತ್ತಾರೋ ನೋಡಿಯೇಬಿಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಸವಾಲು ಹಾಕಿದ್ದಾರೆ.

  •  ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿಯಿಂದ ವಿಫಲ ಯತ್ನ.

  •  ತನಿಖಾ ಸಂಸ್ಥೆಗಳ ದುರುಪಯೋಗ.

  •  ಸರ್ಕಾರವನ್ನು ಹೇಗೆ ಕೆಡಹುತ್ತಾರೆ ನೋಡಿಯೇ ಬಿಡುತ್ತೇನೆ.

  •  ಬಿಜೆಪಿ ನಾಯಕರಿಗೆ ಸಿಎಂ ಸವಾಲು.

  •  ಸರ್ಕಾರ ಅಸ್ಥಿರಗೊಳಿಸುವ ವಿಫಲ ಯತ್ನ.

  •  ರಾಜಕಾರಣಕ್ಕಾಗಿ ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ.

  •  ಬಿಜೆಪಿಯ ಪ್ರಯತ್ನ ಕೈಗೂಡದು.

  •  ತನಿಖಾ ಸಂಸ್ಥೆಗಳು ಬಿಜೆಪಿಯ ಘಟಕಗಳಾಗಿ ಕಾರ್ಯ ನಿರ್ವಹಣೆ.

ರಾಜಕಾರಣಕ್ಕಾಗಿ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸೇರಿದಂತೆ, ವಿವಿಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಈ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ವಿಫಲ ಯತ್ನ ಮಾಡುತ್ತಿದೆ. ಸರ್ಕಾರವನ್ನು ಹೇಗೆ ಕೆಡವುತ್ತಾರೆ ಎನ್ನುವುದನ್ನು ನೋಡಿಯೇಬಿಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ನೇರ ಸವಾಲು ಹಾಕಿದ್ದಾರೆ.

ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಹೃದಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಕರ ಸಂಘದ ಮೂರನೇ ವಾರ್ಷಿಕ ಸಮ್ಮೇಳನದ ಬಳಿಕ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಎಫ್.ಐ.ಆರ್ ದಾಖಲಿಸಲು ಮುಂದಾಗಿದೆ ಎನ್ನುವ ವರದಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ಹಾಗೂ ಕೆಲ ನಾಯಕರ ವಿರುದ್ಧ ಸುಳ್ಳು ಕೇಸ್‌ಗಳನ್ನು ಹಾಕಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದು ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಆದಾಯ ತೆರಿಗೆ ಇಲಾಖೆ ವಂಚನೆ ಮೇಲೆ ಬಂಧಿಸುವ ವಿಷಯದ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಸಂಬಂಧಿಕರು, ಆಪ್ತರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದ್ದು, ಸರ್ಕಾರವನ್ನು ಅಸ್ಥಿರಗೊಳಿಸುವ ವಿಫಲ ಯತ್ನಗಳು ನಡೆಯುತ್ತಿವೆ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಿಜೆಪಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳು ಬಿಜೆಪಿ ಪಕ್ಷದ ಮೋರ್ಚಾಗಳಾಗಿ ಕೆಲಸ ಮಾಡುತ್ತಿವೆ, ಇದು ಖಂಡನಾರ್ಹ ಎಂದು ಹೇಳಿದರು.

ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಸೇರಿದಂತೆ, ಪ್ರತಿಪಕ್ಷದ ಯಾವೊಬ್ಬ ಮುಖಂಡರನ್ನೂ ಬಿಡದೆ, ಸಿಬಿಐ, ಐಟಿ ಹಾಗೂ ಇಡಿ ಇಲಾಖೆಗಳ ಮೂಲಕ ಬೆದರಿಸುವ ತಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸಿಎಂ ವ್ಯಂಗ್ಯ

ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದರೂ, ಬೆಂಗಳೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಿಂತಿರುಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಬಂದಿರಬೇಕು ಎಂದು ವ್ಯಂಗ್ಯವಾಡಿದರು.

ಬಂದ್‌ಗೆ ಬೆಂಬಲ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ, ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ನಾಳಿದ್ದು, (ಇದೇ 10 ರಂದು) ಕಾಂಗ್ರೆಸ್ ಸೇರಿದಂತೆ, ಹಲವು ಪಕ್ಷಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ಸರ್ಕಾರವೂ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ದಸರಾ ಆಚರಣೆ

ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರ ನೇತೃತ್ವದಲ್ಲೇ ವಿಶ್ವವಿಖ್ಯಾತ ದಸರಾ ಮಹೋತ್ಸವ ನಡೆಯಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

Leave a Comment