ಬಿಜೆಪಿ ಮಣಿಸಲು ರಾಹುಲ್-ಹೆಚ್‌ಡಿಕೆ ಚರ್ಚೆ

ಬೆಂಗಳೂರು, ನ. ೮- ಉಪಚುನಾವಣೆ ಸಮರದಲ್ಲಿ ದೋಸ್ತಿ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಮಣಿಸಿದ ಹುರುಪಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ರೂಪಿಸಬೇಕಾದ ರಣತಂತ್ರಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ..

ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಜಯ ಸಾಧಿಸಿದ್ದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಹುಲ್‌ಗಾಂಧಿ ಜತೆ ದೂರವಾಣಿಯಲ್ಲಿ ಮಾತನಾಡಿ ರಾಜಕೀಯ ಬೆಳವಣಿಗೆ ವಿವರಿಸಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿಯ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ ಬಗ್ಗೆಯೂ ಪ್ರಸ್ತಾಪವಾಗಿದ್ದು, ಈ ಸಂಬಂಧ ಹೆಚ್ಚಿನ ಚರ್ಚೆಗೆ ದೆಹಲಿಗೆ ಬರುವಂತೆ ರಾಹು‌ಲ್‌ಗಾಂಧಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದಾರೆ. ಅದರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಂದಿನವಾರ ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಜತೆ ಚರ್ಚೆ ನಡೆಸುವರು.

ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಯಶಸ್ಸು ಸಾಧಿಸಿರುವ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಈ ಎರಡೂ ಪಕ್ಷಗಳ ಮೈತ್ರಿ ಮುಂದುವರೆಯಲಿದೆ ಎಂದು ಉಭಯ ಪಕ್ಷಗಳ ನಾಯಕರುಗಳು ಈಗಾಗಲೇ ಘೋಷಿಸಿದ್ದಾರೆ.

ಈ ಎರಡೂ ಪಕ್ಷಗಳ ಮೈತ್ರಿ ಸ್ವರೂಪದ ಬಗ್ಗೆ ರಾಹುಲ್‌ಗಾಂಧಿ ಅವರ ಜತೆ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ.  ಕರ್ನಾಟಕದಲ್ಲಿ ಬಿಜೆಪಿಯನ್ನು ಮಣಿಸಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ಸಾಧ್ಯ ಎಂಬುದನ್ನು ಅರಿತಿರುವ ಎರಡೂ ಪಕ್ಷಗಳ ನಾಯಕರು ಅದಕ್ಕಾಗಿ ಈಗಿನಿಂದಲೇ ರಣತಂತ್ರಗಳನ್ನು ರೂಪಿಸಲು ಮುಂದಾಗಿದ್ದಾರೆ.

ರಾಹುಲ್‌ಗಾಂಧಿ ಅವರೊಂದಿಗೆ ನಡೆಯುವ ಮಾತುಕತೆ ಸಂದರ್ಭದಲ್ಲಿ ಮುಖ್ಯಮಂತ್ರಿಕುಮಾರಸ್ವಾಮಿ ಅವರು ಉಪಚುನಾವಣೆಯ ಸಮರದಲ್ಲಿ ಗೆಲುವು ಸಾಧಿಸುವ ಮೂಲಕ ಮೈತ್ರಿ ಬಗ್ಗೆ ಇದ್ದ ಅಪನಂಬಿಕೆಗಳು ದೂರವಾಗಿ, ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ. ಹಾಗಾಗಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ, ಒಂದಾಗಿ ಕಣಕ್ಕಿಳಿದರೆ ಬಿಜೆಪಿಯನ್ನು ಮಣಿಸಬಹುದು ಎಂಬುದನ್ನು ರಾಹುಲ್‌ಗಾಂಧಿ ಅವರ ಗಮನಕ್ಕೆ ತರುವರು ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ರಾಹುಲ್‌ಗಾಂಧಿ ಅವರೊಂದಿಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಉಪಸ್ಥಿತರಿರುವರು ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಸಂಬಂಧವೂ ಚರ್ಚೆಗಳು ನಡೆಯಲಿದೆ.

Leave a Comment