ಬಿಜೆಪಿ ಬಂಡಾಯ ಸಿಎಂಗೆ ತಲೆನೋವು

ಬೆಂಗಳೂರು, ಮೇ ೩೧- ಕೊರೊನಾ ಸಂಕಷ್ಟದ ನಡುವೆಯೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ವಿರುದ್ಧವೇ ಕೆಲ ಶಾಸಕರುಗಳು ಅಪಸ್ವರ ತೆಗೆದಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಲ್ಲಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಎರಡು ದಿನಗಳ ಹಿಂದೆಯಷ್ಟೇ ಶಾಸಕ ಉಮೇಶ್ ಕತ್ತಿ ಅವರ ಮನೆಯಲ್ಲಿ ಊಟದ ನೆಪದಲ್ಲಿ ಸಭೆ ಸೇರಿದ್ದ 15 ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರು ಸರ್ಕಾರದಲ್ಲಿ ನಡೆಸಿರುವ ಹಸ್ತಕ್ಷೇಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸರ್ಕಾರದಲ್ಲಿ ಶಾಸಕರ ಕೆಲಸಗಳು ನಡೆಯುತ್ತಿಲ್ಲ. ಎಲ್ಲದಕ್ಕೂ ವಿಜಯೇಂದ್ರ ರವರನ್ನೇ ಶಾಸಕರು ಭೇಟಿ ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾದರೆ ಹೇಗೆ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು ಎನ್ನಲಾಗಿದೆ.
ಶಾಸಕ ಉಮೇಶ್ ಕತ್ತಿ ಅವರ ಮನೆಯಲ್ಲಿ ನಡೆದಿದ್ದು, ಬಂಡಾಯದ ಸಭೆಯಲ್ಲ, ಊಟಕ್ಕೆ ಸೇರಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವು ಅಷ್ಟೇ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ತಿಪ್ಪೆ ಸಾರಿಸಿದ್ದರಾದರೂ ಈ ಸಭೆ ಬಂಡಾಯದ ಸಭೆ ಎಂದೇ ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪುತ್ರನಿಗೆ ಸರ್ಕಾರದ ವಿಚಾರಗಳಲ್ಲಿ ಕೈಹಾಕಲು ಅವಕಾಶ ನೀಡಿರುವುದು ಶಾಸಕರ ಸಿಟ್ಟಿಗೆ ಕಾರಣವಾಗಿ, ಕೆಲವರು ಯಡಿಯೂರಪ್ಪನವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗುತ್ತಿದೆ.
ದೆಹಲಿಗೆ ಬರುವುದು ಬೇಡ
ರಾಜ್ಯ ಬಿಜೆಪಿಯಲ್ಲಿನ ಈ ಎಲ್ಲ ಬೆಳವಣಿಗೆಗಳನ್ನು ಹದ್ದಿನ ಕಣ್ಣಿಟ್ಟು ನೋಡುತ್ತಿರುವ ಬಿಜೆಪಿ ವರಿಷ್ಠರು, ನಾಯಕತ್ವ ಬದಲಾವಣೆ ಸೇರಿದಂತೆ ಎಲ್ಲ ವಿಚಾರದಲ್ಲೂ ಹೈಕಮಾಂಡ್‌ದೆ ಅಂತಿಮ ತೀರ್ಮಾನ ಹಾಗಾಗಿ ಯಾವುದೇ ಶಾಸಕರು ದೆಹಲಿಗೆ ಬರುವುದು ಬೇಡ ಎನ್ನುವ ಖಡಕ್ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಪರ ಅಥವಾ ವಿರೋಧಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸಕರು ದೆಹಲಿಗೆ ಬರಬೇಡಿ. ಎಲ್ಲದಕ್ಕೂ ಸದ್ಯದಲ್ಲೇ ಇತಿಶ್ರೀ ಹಾಡುತ್ತೇವೆ ಎಂಬ ಸಂದೇಶವನ್ನು ಹೈಕಮಾಂಡ್ ನಾಯಕರು ಕಳುಹಿಸಿರುವುದು ಮುಂದಿನ ಬೆಳವಣಿಗೆಗಳು ಏನಾಗಲಿದೆ ಎಂಬ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ.

ವೈರಲ್ ಆದ ಫೋಟೋ
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯ ಸಭೆ ಮೊನ್ನೆ ನಡೆದಿದ್ದಲ್ಲ. ಈ ಹಿಂದೆ ನಡೆದ ವಿಧಾನಮಂಡಲದ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಮಾಜಿ ಸಚಿವ ಮುರುಗೇಶ್ ನಿರಾಣಿ ಮನೆಯಲ್ಲಿ ಕೆಲ ಶಾಸಕರ ಪೂರ್ವಭಾವಿ ಸಭೆ ನಡೆದಿತ್ತು ಎನ್ನಲಾಗಿದ್ದು, ಈ ಸಭೆ ನಡೆದ ಬಗ್ಗೆ ಇಂದು ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಛಾಯಾಚಿತ್ರ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಬಂಡಾಯದ ಸಭೆಗಳು ಮೊದಲಿನಿಂದಲೂ ನಡೆದಿತ್ತು, ಕೊರೊನಾ ಕಾರಣದಿಂದ ಈ ರಾಜಕೀಯ ಚಟುವಟಿಕೆಗಳು ಬಂದ್ ಆಗಿದ್ದವು. ಈಗ ಮತ್ತೆ ಚಟುವಟಿಕೆಗಳು ಬಿರುಸಾಗಿವೆ ಎಂದು ಹೇಳಲಾಗುತ್ತಿದೆ.
ಮುಂದಿನ ವಾರವೂ ಬಿಜೆಪಿ ಶಾಸಕರುಗಳ ಸಭೆಗಳು ನಡೆಯುವ ಸಾಧ್ಯತೆಗಳು ಹೆಚ್ಚಿದ್ದು, ಶಾಸಕರ ಈ ಬಂಡಾಯ, ಅಸಮಾಧಾನ ಎಲ್ಲಿಗೆ ಮುಟ್ಟುತ್ತದೋ ಈಗಲೇ ಹೇಳಲು ಬಾರದು.

Share

Leave a Comment