ಬಿಜೆಪಿ ಪಾಳಯದಲ್ಲಿ ಗರಿಗೆದರಿದ ಚಟುವಟಿಕೆ : ಸೋಮವಾರವೇ ವಿಶ್ವಾಸಮತಯಾಚಿಸಿ-ಯಡಿಯೂರಪ್ಪ

ಬೆಂಗಳೂರು, ಜು 14 -ಅತೃಪ್ತ ಶಾಸಕರ ಬಣ ಸೇರಲು ಸಚಿವ ಎಂಟಿಬಿ ನಾಗರಾಜ್ ಬಿಜೆಪಿ ನಾಯಕ ಆರ್.ಅಶೋಕ್ ಜೊತೆ ಮುಂಬೈಗೆ ತೆರಳುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡವು ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಮಾಧುಸ್ವಾಮಿ, ಸಿ ಟಿ ರವಿ ಸೇರಿದಂತೆ ಕೆಲ ಕಮಲ ನಾಯಕರು ಪಕ್ಷದ ಮುಂದಿನ ನಡೆ, ಸೋಮವಾರ ವಿಧಾನಸಭೆಯಲ್ಲಿ ಪಕ್ಷ ಕೈಗೊಳ್ಳಬೇಕಾದ ತಂತ್ರಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು

ಬಿಜೆಪಿ ಪಾಳಯದಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ರಾಜಕೀಯ ತಂತ್ರ ಪ್ರತಿತಂತ್ರಗಳ ಕುರಿತು ಯಡಿಯೂರಪ್ಪ ತಮ್ಮ ಆಪ್ತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಬಳಿಕ ಅವರು ಪಕ್ಷದ ಮುಖಂಡರೊಡನೆ ಮತ್ತೆ ರೆಸಾರ್ಟ್ ನತ್ತ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮೈತ್ರಿ ಸರ್ಕಾರದ 15 ಶಾಸಕರು ಈಗಾಗಲೇ ಮುಂಬೈಗೆ ತೆರಳಿದ್ದಾರೆ. ಸುಧಾಕರ್, ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸುವ ಮೈತ್ರಿ ನಾಯಕರ ಸಕಲ ಪ್ರಯತ್ನಗಳು ವಿಫಲಗೊಂಡಿವೆ. ಸರ್ಕಾರದ ನಡೆಯಿಂದ ಬೇಸತ್ತಿರುವ ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಸಹ ಮುಂಬೈಗೆ ತೆರಳಿದ್ದಾರೆ. ಹೀಗಾಗಿ ಕುಮಾರಸ್ವಾಮಿ ತಕ್ಷಣ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ನಾಳೆಯೇ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೆ ಮುಂದಾಗಬೇಕು. ಸೋಮವಾರವೇ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಪಡಿಸಬೇಕು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸ್ಪೀಕರ್ ಅವರನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮೈತ್ರಿ ಸರ್ಕಾರದ ಶಾಸಕರಲ್ಲಿ ವಿಶ್ವಾಸವೇ ಇಲ್ಲದ ಮೇಲೆ ಕುಮಾರಸ್ವಾಮಿ ಯಾವ ರೀತಿಯಲ್ಲಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೋ ಗೊತ್ತಿಲ್ಲ. ವಿಶ್ವಾಸವೇ ಇಲ್ಲದ ಸರ್ಕಾರದಲ್ಲಿ ವಿಶ್ವಾಸಮತ ಯಾಚಿಸುವುದು ಬರಿ ಬೂಟಾಟಿಕೆಯಾಗುತ್ತದೆ ಎಂದು ಟೀಕಿಸಿದರು.
ವಿಶ್ವಾಸಮತ ಯಾಚನೆಗೆ ಬೇಕಾದಷ್ಟು ಸದಸ್ಯರ ಸಂಖ್ಯೆ ಕುಮಾರಸ್ವಾಮಿ ಅವರ ಬಳಿಯಲ್ಲಿ ಇಲ್ಲ.ರಾಜ್ಯ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ನ್ಯಾಯವಾಗಿ ಇಂದೇ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ. ವಿಶ್ವಾಸಮತಕ್ಕೆ ತಕ್ಷಣ ಸ್ಪೀಕರ್ ದಿನಾಂಕ ನಿಗದಿ ಮಾಡಲಿ ಎಂದು ಅವರು ಒತ್ತಾಯಿಸಿದರು.

ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನರ ಆಸೆ ಈಡೇರುವ ಕಾಲ ಹತ್ತಿರವಾಗಿದೆ. ಬಿಜೆಪಿ 105 ಶಾಸಕರ ಬಲವಿದೆ. ಹೀಗಾಗಿ ಬಿಜೆಪಿಯೇ ಅಧಿಕಾರ ನಡೆಸಬೇಕು ಎನ್ನುವುದು ರಾಜ್ಯದ ಜನರ ಅಭಿಪ್ರಾಯವಾಗಿದೆ. ಜನರ ಈ ನಿರೀಕ್ಷೆ ಈಡೇರುವ ಸಮಯ ಸನ್ನಿಹಿತವಾಗಿದೆ ಎಂದರು.

ನಿಯಮಾವಳಿ ಪ್ರಕಾರ ಸ್ಪೀಕರ್ ಕಲಾಪ ಸಲಹಾ ಸಮಿತಿ ಸಭೆ ನಡೆಸಿ, ಪ್ರತಿಪಕ್ಷ ನಾಯಕರ ಸಲಹೆ ಪಡೆದು ವಿಶ್ವಾಸಮತ ಯಾಚನೆಗೆ ದಿನಾಂಕ ಹಾಗೂ ದಿನಾಂಕ ನಿಗದಿಪಡಿಸಬೇಕು. ಸೋಮವಾರ ಅಥವಾ ಮಂಗಳವಾರ ಸ್ಪೀಕರ್ ವಿಶ್ವಾಸಮತ ಯಾಚನೆಗೆ ಸಮಯ ನೀಡಬಹುದು ಎಂಬ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಸಿ.ಟಿ.ರವಿ ಮಾತನಾಡಿ, ತಾವು ಈ ಮೊದಲೇ ಹೇಳಿದಂತೆ ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸುವ ಮೈತ್ರಿ ನಾಯಕರ ಪ್ರಯತ್ನಗಳು ಸರ್ಕಸ್ ನಂತಾಗಿದೆ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡದ ಹೊರತು ಬೇರೆ ಯಾವುದೇ ರಾಜಮಾರ್ಗ ಅವರ ಬಳಿಯಿಲ್ಲ. ಇನ್ನಷ್ಟು ಅವಮಾನ ಎದುರಾಗುವ ಮೊದಲು ರಾಜೀನಾಮೆ ನೀಡುವಂತೆ ಅವರಿಗೆ ದೇವೇಗೌಡರೇ ರಾಜಧರ್ಮ ಬೋಧಿಸಲಿದ್ದಾರೆ ಎಂದು ತಮಗೆ ಅನಿಸುತ್ತಿದೆ ಎಂದರು.

ಶಾಸಕಾಂಗ ಸಭೆಯಲ್ಲಿ ಸರ್ಕಾರ ರಚನೆಗೆ ಪಕ್ಷ ನಡೆಸಬೇಕಾದ ತಂತ್ರಗಾರಿಕೆಗಳ ಬಗ್ಗೆ ಚರ್ಚಿಸಲಾಗುವುದು. ಆದರೆ ತಂತ್ರಗಾರಿಕೆ ಏನು ಎಂಬ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಆದರೆ ಸರ್ಕಾರದ ಆಯಸ್ಸು ಇನ್ನು ಕೆಲವು ಗಂಟೆಗಳು ಮಾತ್ರ ಎಂದು ಅವರು ಭವಿಷ್ಯ ನುಡಿದರು.

Leave a Comment