ಬಿಜೆಪಿ ಜೈಲ್ ಭರೋ : ನೂರಾರು ಜನರ ಬಂಧನ

ಕಲಬುರಗಿ,ಜ.12-“ಆರ್.ಎಸ್.ಎಸ್, ಬಜರಂಗದಳದವರು ಉಗ್ರಗಾಮಿಗಳು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ ಖಂಡಿಸಿ ನಗರದಲ್ಲಿಂದು ಪ್ರತಿಭಟನೆ, ಜೈಲ್ ಭರೋ ಚಳವಳಿ ನಡೆಸಿದ ನೂರಾರು ಜನ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ಶಶೀಲ ಜಿ.ನಮೋಶಿ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸುಭಾಷ ಬಿರಾದಾರ, ಯುವ ಮುಖಂಡರಾದ ಚಂದು ಪಾಟೀಲ, ಹಣಮಂತ ಪಾಟೀಲ, ಶರಣು ಸಲಗರ, ವಿಶಾಲ ಧರ್ಗಿ, ಬಸವರಾಜ ಮತ್ತಿಮೂಡ, ಮಹಿಳಾ ಮುಖಂಡರಾದ ದಿವ್ಯಾ ಹಾಗರಗಿ, ಸಾವಿತ್ರಿ ಕುಳಗೇರಿ ಸೇರಿದಂತೆ ನೂರಾರು ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಆರ್.ಎಸ್.ಎಸ್., ಬಿಜೆಪಿ ಭಯೋತ್ಪಾದಕರಾ ?, ಭಯೋತ್ಪಾದಕರು ಯಾರು ಸಿದ್ದರಾಮಯ್ಯನವರೇ ?, ಸಿದ್ದರಾಮಯ್ಯನವರೇ ಉತ್ತರ ಕೊಡಿ ಎಂಬ ಭಿತ್ತಿ ಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಂಧನದ ವೇಳೆ ಪೊಲೀಸ್ ಸಿಬ್ಬಂದಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೂಡಲೇ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Leave a Comment